ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವವರ ಸಂಖ್ಯೆ 873 ತಲುಪಿದೆ. ಇಂದು ಗುಜರಾತ್ ಒಂದರಲ್ಲೇ 4 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಪೈಕಿ ಅಹಮದಾಬಾದ್-2, ಭಾವನಗರ್ ಮತ್ತು ಸೂರತ್ನಲ್ಲಿ ಒಂದೊಂದು ಸಾವು ಆಗಿದೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 20ಕ್ಕೂ ಹೆಚ್ಚಾಗಿದೆಯಾದರೂ ಇದವರೆಗೂ ಕೇಂದ್ರ ಸರ್ಕಾರ ಅಧಿಕೃತ ಸಾವಿನ ಸಂಖ್ಯೆ ಮಾಹಿತಿಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿಲ್ಲ.
ಭಾರತದಲ್ಲಿ ಶುಕ್ರವಾರ ಒಂದೇ ದಿನ 144 ಸೋಂಕಿತ ಪ್ರಕರಣಗಳು ದಾಖಲಾಗಿವೆ. ನಿನ್ನೆ ತುಮಕೂರಿನಲ್ಲಿ 65 ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೂ ಪತ್ತೆಯಾದ ಕೊರೋನಾ ಪ್ರಕರಣಗಳ ಪೈಕಿ ಒಂದೇ ದಿನ ದಾಖಲಾದ ಅತಿಹೆಚ್ಚು ಸೋಂಕಿತ ಪ್ರಕರಣ ಶುಕ್ರವಾರದ್ದಾಗಿದೆ. ನಿನ್ನೆ ಕರ್ನಾಟಕದಲ್ಲಿ 7 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಉಳಿದಂತೆ, ಕೇರಳ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್ ರಾಜ್ಯಗಳ್ಲಲೂ ಹಲವು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಮಹಾರಾಷ್ಟ್ರ, ಗುಜರಾತ್, ಶ್ರೀನಗರ ಮತ್ತು ಕರ್ನಾಟಕಗಳಲ್ಲಿ ಈ ಸೋಂಕಿಗೆ ಜನ ಸಾವನ್ನಪ್ಪಿದ್ದಾರೆ. ಗುಜರಾತ್ನಲ್ಲಿ ಶನಿವಾರ ಆರು ಹೊಸ ಪ್ರಕರಣ, ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಐದು ಹೊಸ ಪ್ರಕರಣ ದೃಢಪಟ್ಟಿವೆ.
ಇನ್ನು, ಗುಜರಾತ್ನಲ್ಲಿ ಮೂರು ಕೋವಿಡ್-19 ಪ್ರಕರಣಗಳು ಶುಕ್ರವಾರ ದೃಢಪಟ್ಟಿದ್ದವು. ಇಂದು ಈ ರಾಜ್ಯದಲ್ಲಿ 6 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.