ಭಾರತದಲ್ಲಿ 8ನೇ ವ್ಯಕ್ತಿ ಕೊರೋನಾಗೆ ಬಲಿ; ಪ್ರಕರಣಗಳ ಸಂಖ್ಯೆ 415ಕ್ಕೆ ಏರಿಕೆ

ಮುಂಬೈ: ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 8ಕ್ಕೆ ಏರಿದೆ. ಭಾರತದಲ್ಲಿ ಅತಿ ಹೆಚ್ಚು ಕೊರೋನಾ ಬಾಧೆ ಇರುವ ಮಹಾರಾಷ್ಟ್ರದಲ್ಲಿ ಇಂದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹಿಂದೆ ಕೊರೋನಾದಿಂದ ಪೀಡಿತರಾಗಿ ಗುಣಮುಖರಾಗಿದ್ದ 68 ವರ್ಷದ ವ್ಯಕ್ತಿ ಇಂದು ಮುಂಬೈನಲ್ಲಿ ಮರಣ ಹೊಂದಿದ್ದಾರೆ. ಇವರು ಫಿಲಿಪೈನ್ಸ್ ದೇಶದಿಂದ ಭಾರತಕ್ಕೆ ಬಂದಿದ್ದರು.

ಮುಂಬೈವೊಂದರಲ್ಲೇ ಮೂರು ವ್ಯಕ್ತಿಗಳು ಕೊರೋನಾಗೆ ಬಲಿಯಾದಂತಾಗಿದೆ. ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 80 ದಾಟಿದೆ. ಭಾರತದಾದ್ಯಂತ ಪ್ರಕರಣಗಳ ಸಂಖ್ಯೆ 415 ದಾಟಿದೆ.

ಇದೇ ವೇಳೆ, ಪ್ರಧಾನಿ ಮೋದಿ ಕರೆ ಕೊಟ್ಟಂತೆ ಇಡೀ ದೇಶದಲ್ಲಿ ಜನರು ಜನತಾ ಕರ್ಫ್ಯೂಗೆ ಬೆಂಬಲ ನೀಡಿದರು. ಮುಂಬರುವ ದಿನಗಳಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚುಹೆಚ್ಚಾಗಿ ಹರಡುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿವೆ. ದೇಶಾದ್ಯಂತ ಕೊರೋನಾ ಪ್ರಕರಣಗಳು ಕಂಡುಬಂದಿರುವ ಪ್ರದೇಶಗಳನ್ನು ಗುರುತಿಸಿ ಅವುಗಳ ದಿಗ್ಬಂಧನ (ಲಾಕ್ ಡೌನ್) ಮಾಡಲಾಗಿದೆ. 13 ರಾಜ್ಯಗಳಲ್ಲಿನ 80 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿದೆ. ಇದರಲ್ಲಿ ಕರ್ನಾಟಕ 9 ಜಿಲ್ಲೆಗಳೂ ಸೇರಿವೆ.
ವಿಶ್ವಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ 3.4 ಲಕ್ಷಕ್ಕೆ ಏರಿದೆ. ಸಾವಿನ ಸಂಖ್ಯೆ 15 ಸಾವಿರ ಸಮೀಪಕ್ಕೆ ಹೋಗಿದೆ. ಚೀನಾದಲ್ಲಿ ಕೆಲ ಕಾಲ ಸಂಪೂರ್ಣ ಸ್ಥಗಿತಗೊಂಡಿದ್ದ ಹೊಸ ಕೊರೋನಾ ಪ್ರಕರಣಗಳು ಈಗ ಮರುಕಳಿಸಲು ಆರಂಭಿಸಿವೆ. ಅಲ್ಲಿ ದಿಗ್ಬಂಧನಗಳನ್ನ ತೆಗೆದ ಬಳಿಕ ಮತ್ತೆ ಸೋಂಕು ಹರಡತೊಡಗಿದೆ. ಇವತ್ತು 39 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇಟಲಿಯಲ್ಲಿ ಸಾವಿನ ಸಂಖ್ಯೆ 5,476ಕ್ಕೆ ಬಂದಿದೆ. ಅಮೆರಿಕದಲ್ಲಿ ಒಂದೇ ದಿನ 33 ಮಂದಿ ಸಾವನ್ನಪ್ಪಿದ್ದಾರೆ, 1 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಆ ದೇಶದಲ್ಲಿ ಈಗ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 34 ಸಾವಿರ ದಾಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ