15 ದಿನ ಸಿಟಿಯಿಂದ ಹಳ್ಳಿಗಳಿಗೆ ಹೋಗಬೇಡಿ; ಇನ್ಮುಂದೆ ವಿಕ್ಟೋರಿಯಾ ಆಸ್ಪತ್ರೆ ಕೊರೋನಾ ಕೇಂದ್ರ; ಸಿಎಂ ಬಿಎಸ್​ವೈ

ಬೆಂಗಳೂರು: ಮಾರಣಾಂತಿಕ ಕೊರೋನಾ ವೈರಸ್ನಿಗ್ರಹ ಮಾಡಲು ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ. ಅದಕ್ಕೆ ಕರ್ನಾಟಕದ ಜನತೆ ಸಂಪೂರ್ಣವಾಗಿ ಸಹಕಾರ  ಕೊಟ್ಟಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆಯಿಂದ ನಾನು ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಇಂದಿನ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದ್ದೇನೆ. 1700 ಹಾಸಿಗೆಗಳನ್ನು ಒಳಗೊಂಡ ವಿಕ್ಟೋರಿಯಾ ಆಸ್ಪತ್ರೆಯನ್ನು ವಿಶೇಷ ಆಸ್ಪತ್ರೆಯಾಗಿ ಪರಿವರ್ತಿಸುವುದರ ಬಗ್ಗೆ ಚರ್ಚೆ ಮಾಡಲಾಗಿದೆ. ಅಂದರೆ ವಿಕ್ಟೋರಿಯಾ ಆಸ್ಪತ್ರೆಯನ್ನು ಕೊರೋನಾ ಕೇಂದ್ರವನ್ನಾಗಿ ಮಾಡಲು ಚಿಂತಿಸಲಾಗಿದೆ. ಅದಕ್ಕಾಗಿ ಈಗಾಗಲೇ ಅಲ್ಲಿ ದಾಖಲಾಗಿರುವ ರೋಗಿಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲು ಮಾಡಲು ಚಿಂತಿಸಲಾಗಿದೆ ಎಂದರು.
ಮುಂದುವರೆದ ಅವರು, ಪ್ರತಿ 10 ಲಕ್ಷ ಜನರಲ್ಲಿ 200 ಜನರಿಗೆ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಸಜ್ಜಾಗಿದೆ. ಟಾಸ್ಕ್ ಫೋರ್ಸ್ ತಂಡ ಹಿರಿಯ ಅಧಿಕಾರಿಗಳ ತಂಡದ ಜೊತೆ ಕಾರ್ಯ ನಿರ್ವಹಿಸುತ್ತದೆ. ಅಂತರಾಷ್ಟ್ರೀಯ ಪ್ರಯಾಣಿಕರು ಹಾಗೂ ಸ್ಥಳೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲು ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಹೇಳಿದರು.
ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ ಪಾರಂಪರಿಕ ಕಟ್ಟಡ ಬಾಲ ಬ್ರೂಯಿ ಅತಿಥಿ ಗೃಹವನ್ನು ಕೊರೋನಾ ವಾರ್ ರೂಮ್ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಬಿಎಸ್​ವೈ ತಿಳಿಸಿದರು.
ಇದೇ ವೇಳೆ, ಜನ ಯಾವುದಕ್ಕೂ ಗಾಬರಿ ಆಗುವ ಅವಶ್ಯಕತೆ ಇಲ್ಲ. ದವಸ ಧಾನ್ಯಗಳ ಬಗ್ಗೆ ತಲೆ ಕೆಡೆಸಿಕೊಳ್ಳಬೇಡಿ. ಯಾವುದಕ್ಕೂ ತೊಂದರೆ ಆಗದ ರೀತಿ ಸರ್ಕಾರ ಕ್ರಮ ವಹಿಸಿದೆ. ಎರಡು ತಿಂಗಳ ರೇಷನ್​ ಒಟ್ಟಿಗೆ ಕೊಡಲು ನಿರ್ಧಾರ ಮಾಡಲಾಗಿದೆ ಎಂದರು.
15 ದಿನಗಳ ಕಾಲ ಯಾರೂ ಸಹ ಸಿಟಿಯಿಂದ ಹಳ್ಳಿಗಳಿಗೆ ಹೋಗಬೇಡಿ. ಈಗ ಹಳ್ಳಿಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ನಗರಗಳಿಂದ ಹಳ್ಳಿಗಳಿಗೆ ಯಾರೂ ಹೋಗಬೇಡಿ ಎಂದು ಸಿಎಂ ಸಾರ್ವಜನಿಕರಲ್ಲಿ  ಮನವಿ ಮಾಡಿದರು.
ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಮುಂದೂಡಲಾಗಿದೆ. ಮಾರ್ಚ್​​ 27ರಂದು ನಡೆಯಬೇಕಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ. ರಾಜ್ಯದ ಎಲ್ಲಾ ಗಡಿ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗೆ ಪರವಾನಗಿ ನೀಡಲು ತೀರ್ಮಾನ ಮಾಡಲಾಗಿದೆ. ಲ್ಯಾಬ್ ಟೆಸ್ಟ್ ಪ್ರಮಾಣ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ.  ಸೋಂಕಿತರ ಸಂಪರ್ಕದಲ್ಲಿರುವವರ ಎಲ್ಲರನ್ನು ತಪಾಸಣೆ ಮಾಡಲು ನಿರ್ಧರಿಸಲಾಗಿದೆ. ಟಾಸ್ಕ್ ಫೋರ್ಸ್ ಮಾದರಿಯಂತೆ ಜಿಲ್ಲಾ ಮಟ್ಟದಲ್ಲಿ ನುರಿತ ವ್ಯದ್ಯರ ತಂಡದಿಂದ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ಸಿಎಂ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ