ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ಗೆ 2ನೇ ವ್ಯಕ್ತಿ ಸಾವನ್ನಪ್ಪುವ ಮೂಲಕ ಭಾರತದಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇಟಲಿಯ ಪ್ರಜೆಯೋರ್ವ ರಾಜಸ್ಥಾನದ ಜೈಪುರದಲ್ಲಿ ಸಾವನ್ನಪ್ಪಿದ ಪ್ರಕರಣವನ್ನೂ ಸೇರಿಸಿದರೆ ದೇಶದಲ್ಲಿ 6 ಜನರು ಸಾವನ್ನಪ್ಪಿದಂತಾಗಿದೆ.
ಮಹಾರಾಷ್ಟ್ರ ಮೂಲದ 63 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ವೈರಸ್ಗೆ ಬಲಿಯಾಗಿದ್ದಾರೆ. ಮಾ. 1ರಂದು ಕೊರೋನಾ ಶಂಕೆಯಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ಈ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮಾ. 21ರ ರಾತ್ರಿ 11 ಗಂಟೆಗೆ ಸಾವನ್ನಪ್ಪಿದ್ದಾರೆ. ಡಯಾಬಿಟಿಸ್, ಅಧಿಕ ರಕ್ತದೊತ್ತಡವಿದ್ದ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ.
ರಾಜಸ್ತಾನದ ಜೈಪುರದಲ್ಲಿ ಚಿಕಿತ್ಸೆಯಲ್ಲಿದ್ದ 69 ವರ್ಷದ ಇಟಲಿ ಪ್ರಜೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದರು. ಅದನ್ನೂ ಸೇರಿಸಿದರೆ ಭಾರತದಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಭಾರತದ ಪ್ರಜೆಗಳನ್ನು ಮಾತ್ರ ಪರಿಗಣಿಸಿದರೆ ಸಾವಿನ ಸಂಖ್ಯೆ 5 ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕರ್ನಾಟಕದ ಕಲಬುರ್ಗಿಯಲ್ಲಿ ಮೊದಲ ವ್ಯಕ್ತಿ ಕೊರೋನಾ ವೈರಸ್ಗೆ ಬಲಿಯಾಗಿದ್ದರು. ನಂತರ ದೆಹಲಿ, ಮುಂಬೈನಲ್ಲಿ ಸಾವಿನ ಪ್ರಕರಣ ದಾಖಲಾಗಿತ್ತು.