ಹುಬ್ಬಳ್ಳಿ: ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ನಾಡೋಜ ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 10 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ಇಂದು ಅಂತ್ಯಕ್ರಿಯೆ ಜರುಗಲಿದೆ.
ಕಡಿಮೆ ರಕ್ತದೊತ್ತಡ, ರಕ್ತಹೀನತೆ, ಬ್ರೇನ್ ಹೆಮರೈಜ್, ಶ್ವಾಸಕೋಶದ ಸೋಂಕು ಸೇರಿದಂತೆ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಪಾಟೀಲ ಪುಟ್ಟಪ್ಪ ಅವರಿಗೆ ಕಿಮ್ಸ್ ನಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ ಅವರಿಗೆ ಶ್ವಾಸಕೋಶದ ಸೋಂಕು ತಗುಲಿತ್ತು. ಹಲವು ದಿನಗಳ ಚಿಕಿತ್ಸೆಯ ನಂತರ ಪಾಪು ಕೊನೆಯುಸಿರೆಳೆದರು ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.
ಪಾಪು ನಿಧನ ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.
ಹುಬ್ಬಳ್ಳಿಯ ಪಾಪು ಪ್ರಪಂಚ ನಿವಾಸದಲ್ಲಿ ಅವರ ಪಾರ್ಥವ ಶರೀರವನ್ನು ಇಂದು ಬೆಳಿಗ್ಗೆ 9 ರಿಂದ 12 ವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನ 12 ಗಂಟೆಯಿಂದ ಅರ್ಧಗಂಟೆ ಕಾಲ ಧಾರವಾಡ ಕರ್ನಾಟಕದ ವಿದ್ಯಾವರ್ಧಕ ಸಂಘದಲ್ಲಿ ಜನರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
ನಂತರ ಹಾವೇರಿಯ ರಾಣೇಬೆನ್ನೂರು ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಪಾಟೀಲ ಪುಟ್ಟಪ್ಪ ಅವರ ಪುತ್ರ ಅಶೋಕ ಪಾಟೀಲ ಮಾಹಿತಿ ನೀಡಿದ್ದಾರೆ.