ಕೊರೊನಾ ಭೀತಿ: ಬೆಂಗಳೂರಿನ ಆರೆಸ್ಸೆಸ್ ಉನ್ನತ ಮಟ್ಟದ ಸಭೆ ರದ್ದು

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಉನ್ನತ ಮಟ್ಟದ ನೀತಿ ನಿರೂಪಣೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಬಂಧ ಮಾ15ರಿಂದ17ರವರೆಗೆ ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್)ವನ್ನು ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಪಡಿಸಿದೆ.

ಮಾ.15ರಬೆಳಗ್ಗೆ ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಎಬಿಪಿಎಸ್ ಗೆ ಚಾಲನೆ ನೀಡಬೇಕಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸಹಿತವಾಗಿ ವಿಶ್ವಹಿಂದು ಪರಿಷತ್, ಎಬಿವಿಪಿ, ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘ ಸಹಿತವಾಗಿ ಆರೆಸ್ಸೆಸ್ ನ ಪರಿವಾರ ಸಂಘಟನೆಯ ಪ್ರಮುಖರು ಭಾಗವಹಿಸುವವರಿದ್ದರು.

ಕೊರೊನಾ ಎಲ್ಲೆಡೆ ವ್ಯಾಪಿಸುತ್ತಿರುವ ಜತೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿವ ಉದ್ದೇಶದಿಂದ ಎಬಿಪಿಎಸ್ ರದ್ದು ಮಾಡಲಾಗಿದೆ ಎಂದು ಸರಕಾರ್ಯವಾಹ ಸುರೇಶ್ ಜೋಷಿ (ಬೈಯ್ಯಾಜಿ ) ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕೋವಿಡ್-೧೯ ಗಂಭೀರತೆಯನ್ನು ಪರಿಗಣಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿ ಅನುಸಾರ, ಬೆಂಗಳೂರಿನಲ್ಲಿ ನಡೆಯಬೇಕಿದ್ದ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ರದ್ದುಗೊಳಿಸಲಾಗಿದೆ. ಆರೆಸ್ಸೆಸ್ ಸ್ವಯಂಸೇವಕರು ಸರ್ಕಾರಗಳ ಜೊತೆ ಕೈಜೋಡಿಸಿ ಸಮಾಜದದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಈ ಮೂಲಕ ಕೇಳಿಕೊಳ್ಳಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಎಬಿಪಿಎಸ್ ಸಂಬಂಧ ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿತ್ತು ಜತೆಗೆ ಸಭೆಗೆ ಬರುವವರನ್ನು ಕೊರೊನಾ ಪರೀಕ್ಷೆ ನಡೆಸಿ ಒಳಗೆ ಬಿಡುವ ಬಗ್ಗೆಯೂ ನಿರ್ಧರಿಸಲಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ