ಅಡಿಕೆ, ತೆಂಗಿನ ಮರ ಕಡಿಯಲು ಆದೇಶಿಸಿದ್ದ ತಹಶೀಲ್ದಾರ್‌ಗೆ ತರಾಟೆ

ಬೆಂಗಳೂರು: ಸುಮಾರು 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟವನ್ನು ಏಕಾಏಕಿ ಉರುಳಿಸಿ ದರ್ಪ ತೋರಿದ್ದ ತಹಶೀಲ್ದಾರ್ ನಡೆಗೆ ಸರ್ಕಾರ ಗರಂ ಆಗಿದೆ. ತುಮಕೂರು ಜಿಲ್ಲೆ ಗುಬ್ಬಿ ತಹಶೀಲ್ದಾರ್ ಮಮತಾ ಅವರನ್ನ ಹುದ್ದೆಯಿಂದ ಬಿಡುಗಡೆಗೊಳಿಸಿ ಕಂದಾಯ ಇಲಾಖೆ ಆದೇಶಿಸಿದೆ. ಅಷ್ಟೇ ಅಲ್ಲ ತಹಶೀಲ್ದಾರ್ ಅವರನ್ನ ವಿಧಾನಸೌಧಕ್ಕೆ ಕರೆಸಿ ಸಿಎಂ, ಕಂದಾಯ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಧಾನಸೌಧಕ್ಕೆ ಗುಬ್ಬಿ ತಹಶೀಲ್ದಾರ್ ಮಮತಾ ಅವರನ್ನು ಕಂದಾಯ ಸಚಿವ ಆರ್.ಅಶೋಕ್ ಕರೆಸಿದ್ರು. ತಹಶೀಲ್ದಾರ್ ಅವರಿಂದ ವಿವರಣೆ ಕೇಳಿ ತರಾಟೆಗೆ ತೆಗೆದುಕೊಂಡ್ರು ಎನ್ನಲಾಗಿದೆ. ಬಳಿಕ ತಹಶೀಲ್ದಾರ್ ಅವರನ್ನ ಕಂದಾಯ ಸಚಿವ ಆರ್.ಅಶೋಕ್ ಸಿಎಂ ಬಳಿ ಕರೆದುಕೊಂಡು ಹೋಗಿದ್ರು. ಸಿಎಂ ಕೂಡ ತಹಶೀಲ್ದಾರ್ ಅವರನ್ನ ತರಾಟೆಗೆ ತೆಗೆದುಕೊಂಡು ಗರಂ ಆದ್ರು ಎನ್ನಲಾಗಿದೆ. ನಂತರ ಮಮತಾ ಅವರನ್ನ ತಹಶೀಲ್ದಾರ್ ಹುದ್ದೆಯಿಂದ ಬಿಡುಗಡೆಗೊಳಿಸಿ ಸರ್ಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಕಂದಾಯ ಇಲಾಖೆ ಆದೇಶ ಮಾಡಿದೆ.

ಅಂದಹಾಗೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಎಂಬುವವರಿಗೆ ಉಡುಸಲಮ್ಮ ದೇವರಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನು ನೀಡಲಾಗಿತ್ತು ಎನ್ನಲಾಗಿದೆ. ಕಳೆದ 30 ವರ್ಷಗಳಿಂದಲೂ ತೆಂಗು, ಅಡಿಕೆ ಬಾಳೆ ಬೆಳೆದುಕೊಂಡು ಬಂದಿದ್ದಾರೆ. ಈ ನಡುವೆ ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗೋದಿಲ್ಲ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಹಶೀಲ್ದಾರ್ ಮಮತಾ ಅವರು ತೋಟವನ್ನು ಉರುಳಿಸಲು ಆದೇಶ ಕೊಟ್ಟಿದ್ದಾರೆ ಎನ್ನಲಾಗಿದೆ. ಅದರಂತೆ ಗ್ರಾಮ ಲೆಕ್ಕಿಗ ಮುರುಳಿ ಯಾವುದೇ ನೋಟಿಸ್ ನೀಡದೇ ಏಕಾಏಕಾಏಕಿ ಫಸಲಿಗೆ ಬಂದಿದ್ದ ತೋಟಕ್ಕೆ ನುಗ್ಗಿ 150 ಅಡಿಕೆ, 20 ತೆಂಗು ಮತ್ತು ಬಾಳೆ ಗಿಡವನ್ನು ಉರುಳಿಸಿದ್ದರು. ಇದರಿಂದ ಸಣ್ಣ ಕೆಂಪಯ್ಯ, ಸಿದ್ದಮ್ಮ ಕುಟುಂಬದ ಗೋಳಾಟದ ವಿಡಿಯೋ ವೈರಲ್ ಆಗಿತ್ತು. ತಹಶೀಲ್ದಾರ್ ವಿರುದ್ಧ, ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ