ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆ ಮತ್ತು ಶೇರು ಮಾರುಕಟ್ಟೆಯ ಕುಸಿತದ ಕಾರಣದಿಂದ ಮುಖೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟವನ್ನು ಕಳೆದುಕೊಂಡಿದ್ದಾರೆ. ಚೀನಾದ ಅಲಿಬಾಬಾ ಗುಂಪಿನ ಜಾಕ್ ಮಾ ಮೊದಲ ಸ್ಥಾನಕ್ಕೇರಿದ್ದಾರೆ.
ತೈಲ ದರ ಸಮರ, ಕೊರೊನಾ ಭೀತಿಯ ಕಾರಣದಿಂದ ಶೇರು ಮಾರುಕಟ್ಟೆಯಲ್ಲಿ ದಿಢೀರ್ ಬದಲಾವಣೆಗಳು ನಡೆದಿದ್ದವು. ಸೋಮವಾರ ರಿಲಯನ್ಸ್ ಸೇರಿದಂತೆ ಹಲವಾರು ಕಂಪನಿಗಳ ಶೇರುಗಳು ಕುಸಿತ ಕಂಡು ಶೇರು ಮಾರುಕಟ್ಟೆಯ ರಕ್ತಪಾತಕ್ಕೆ ಕಾರಣವಾಗಿತ್ತು. ಸೋಮವಾರ ಒಂದೇ ದಿನ ಮುಖೇಶ್ ಅಂಬಾನಿ ಅವರಿಗೆ ಸುಮಾರು 42,855 ಕೋಟಿ ರೂ. ನಷ್ಟು ನಷ್ಟವಾಗಿತ್ತು.
ಸದ್ಯ ಏಷ್ಯಾದ ಶ್ರೀಮಂತ ವ್ಯಕ್ತಿ ಸ್ಥಾನಕ್ಕೆ ತಲುಪಿರುವ ಜಾಕ್ ಮಾ ಆಸ್ತಿ 44.5 ಬಿಲಿಯನ್ ಡಾಲರ್. ಸದ್ಯ ಅಂಬಾನಿ 42 ಬಿಲಿಯನ್ ಡಾಲರ್ ನಷ್ಟು ಆಸ್ತಿ ಹೊಂದಿದ್ದಾರೆ.
2009ರ ನಂತರ ರಿಲಯನ್ಸ್ ಇದೇ ಮೊದಲ ಬಾರಿಗೆ ಅತೀ ದೊಡ್ಡ ಕುಸಿತ ಅನುಭವಿಸಿದೆ. 2018ರಲ್ಲಿ ಮುಖೇಶ್ ಅಂಬಾನಿ ಏಷ್ಯಾದ ನಂ.1 ಶ್ರೀಮಂತ ಸ್ಥಾನಕ್ಕೇರಿದ್ದರು.