ನವದೆಹಲಿ: ಕಳೆದೆರಡು ದಿನಗಳಿಂದ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಕಾಂಗ್ರೆಸ್ಗೆ ತಲೆನೋವಾಗಿದ್ದು, ಕಮಲ್ನಾಥ್ ನೇತೃತ್ವದ ಸರ್ಕಾರ ಯಾವುದೇ ಕ್ಷಣದಲ್ಲೂ ಬೀಳುವ ಸಾಧ್ಯತೆಯಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾರನ್ನು ಭೇಟಿ ಮಾಡಿರುವ ಕಾಂಗ್ರೆಸ್ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಮೂಲಕ ರಾಹುಲ್ ಗಾಂಧಿಯವರ ಆಪ್ತ ವಲಯದಲ್ಲಿದ್ದ ಮತ್ತೊಬ್ಬ ನಾಯಕ ಕಾಂಗ್ರೆಸ್ ತೊರೆದಿದ್ದಾರೆ. ಜತೆಗೆ ಬಿಜೆಪಿಯನ್ನು ಇಂದು ಸಂಜೆಯೇ ಸೇರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಅಮಿತ್ ಶಾ ಮತ್ತು ಮೋದಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿಯೇ ಇಂತದ್ದೊಂದು ಊಹಾಪೋಹ ಕೇಳಿ ಬರತೊಡಗಿತ್ತು. ಇದೀಗ ಎಲ್ಲಾ ಊಹಾಪೋಹಗಳಿಗೂ ತೆರೆ ಬಿದ್ದಿತ್ತು ಕಾಂಗ್ರೆಸ್ ತೊರೆದು ಸಿಂಧಿಯಾ ಹೊರ ನಡೆದಿದ್ದಾರೆ.
ಜ್ಯೋತಿರಾಧಿತ್ಯ ಸಿಂಧಿಯಾ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಬಳಿಕ ದೆಹಲಿಯಲ್ಲಿ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸಿಂಧಿಯಾ ಬೆಂಬಲಿಗ 14 ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೆಂಗಳೂರಿನ ವೈಟ್ಫೀಲ್ಡ್ನ ರೆಸಾರ್ಟ್ನಲ್ಲಿರುವ ಶಾಸಕರು ಇ-ಮೇಲ್ ಮುಖೇನ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಮಧ್ಯಪ್ರದೇಶ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದ 22 ಸಚಿವರು ಮತ್ತು 14 ಶಾಸಕರು ಸಿಂಧಿಯಾ ಪರ ಇರುವ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದ್ದಾರೆ.ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಸಿಂಧಿಯಾ ಖುದ್ದು ತಮ್ಮ ಟ್ವಿಟ್ಟರ್ ಖಾತೆಯನ್ನು ಪೋಸ್ಟ್ ಮಾಡಿದ್ದಾರೆ. ಪತ್ರದಲ್ಲಿ ತಮ್ಮ 18 ವರ್ಷಗಳ ಕಾಂಗ್ರೆಸ್ ಪಯಣವನ್ನು ಅಂತ್ಯಗೊಳಿಸುತ್ತಿರುವುದಾಗಿ ಹೇಳಿರುವ ಅವರು, ಹೊಸ ಅಧ್ಯಾಯವನ್ನು ಇಂದಿನಿಂದ ಆರಂಭಿಸುವುದಾಗಿ ತಿಳಿಸಿದ್ದಾರೆ.
ಸಿಂಧಿಯಾ ಉಚ್ಛಾಟನೆ:
ಒಂದೆಡೆ ಜ್ಯೋತಿರಾಧಿತ್ಯ ಸಿಂಧಿಯಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರೆ, ಕಾಂಗ್ರೆಸ್ ಸಿಂಧಿಯಾರನ್ನು ಉಚ್ಛಾಟಿಸಿದೆ. ಪಕ್ಷವಿರೋಧಿ ಕೆಲಸದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆ ಸೋನಿಯಾ ಗಾಂಧಿಯವರ ಸೂಚನೆ ಮೇಲೆ ಉಚ್ಛಾಟಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಪತ್ರ ಹೊರಡಿಸಿದ್ದಾರೆ.
ಸಿಂಧಿಯಾ ಪತ್ರದಲ್ಲೇನಿದೆ?:
“18 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಇದು ಬದುಕಿನ ಬೇರೆ ಅಧ್ಯಾಯ ಆರಂಭಿಸುವ ಕಾಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಕಳೆದೊಂದು ವರ್ಷದಿಂದ ಈ ಸಮಯ ಬಂದೇಬರುತ್ತದೆ ಎಂಬುದು ತಮಗೂ ತಿಳಿದಿದೆ,” ಎಂದು ಸಿಂಧಿಯಾ ಪತ್ರದಲ್ಲಿ ಹೇಳಿದ್ದಾರೆ.
ಮುಂದುವರೆದ ಅವರು “ನನ್ನ ರಾಜಕೀಯದ ಆರಂಭದ ದಿನಗಳಿಂದಲೂ ನನ್ನ ರಾಜ್ಯದ ಜನರಿಗೆ ಮತ್ತು ದೇಶದ ಜನರ ಸೇವೆ ಮಾಡಬೇಕು ಎಂಬುದೇ ನನ್ನ ಧ್ಯೇಯ. ಆದರೆ ಕಾಂಗ್ರೆಸ್ ಪಕ್ಷದಲ್ಲಿದ್ದು ನನಗೆ ಜನರ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ,” ಎಂದಿದ್ದಾರೆ.
“ಜನತೆ ಮತ್ತು ಕಾರ್ಯಕರ್ತರ ಆಶಯಗಳನ್ನು ಈಡೇರಿಸಲು ನಾನು ಹೊಸ ಆರಂಭವನ್ನು ಮಾಡಲೇಬೇಕಾದ ಅನಿವಾರ್ಯತೆಯಿದೆ. ಇಷ್ಟು ದಿನಗಳ ಕಾಲ ಜನರ ಸೇವೆಗೆ ತಾವು ಮತ್ತು ಪಕ್ಷದ ಎಲ್ಲಾ ನಾಯಕರು ಸಹಕರಿಸಿದ್ದಕ್ಕೆ ಭಾವಪೂರ್ಣ ಅಭಿನಂದನೆಗಳು,” ಎನ್ನುವ ಮೂಲಕ ಸಿಂಧಿಯಾ ಕಾಂಗ್ರೆಸ್ನ ನಂಟನ್ನು ಅಧಿಕೃತವಾಗಿ ತೊರೆದಿದ್ದಾರೆ.