ರಾಜ್ಯದಲ್ಲಿ ನಾಲ್ಕು ಜನರಿಗೆ ಕೊರೋನಾ ವೈರಸ್​ ಪಾಸಿಟಿವ್​; ದೃಢಪಡಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ಜಗತ್ತಿನಾದ್ಯಂತ ತಲ್ಲಣ ಮೂಡಿಸುತ್ತಿರುವ ಕೊರೋನಾ ವೈರಸ್ಸೋಂಕು ರಾಜ್ಯದ ನಾಲ್ವರಲ್ಲಿ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ದೃಢಪಡಿಸಿದ್ದಾರೆ. ಅಂದರೆ ಮೂರು ಹೊಸ ಸೋಂಕಿತರು ಇಂದು ಪತ್ತೆಯಾಗಿದ್ದಾರೆ

ನಿನ್ನೆ ಅಮೆರಿಕದಿಂದ ಮರಳಿದ್ದ ವೈಟ್​ಫೀಲ್ಡ್​ ಮೂಲದ ಟೆಕ್ಕಿಯಲ್ಲಿ ಕೊರೋನಾ ಸೋಂಕು ಇರುವುದು ದೃಢ ಪಟ್ಟಿದ್ದು, ಅವರಿಗೆ ರಾಜೀವ್​ ಗಾಂಧಿ ಆಸ್ಪತ್ರೆಯಲ್ಲಿ ತೀವ್ರಾ ನಿಗಾ ಘಟಕದಲ್ಲಿ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ.  ಇದರ ಬೆನ್ನಲ್ಲೇ ಇಂದು ಮತ್ತೆ ಮೂವರಿಗೆ ಈ ಸೋಂಕು ಇರುವುದು ದೃಢಪಟ್ಟಿದೆ.

ಸೋಂಕಿತರನ್ನು ಕುಟುಂಬ ಸದಸ್ಯರಿಂದ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದ ಜನರು ಮುಂಜಾಗೃತ ಕ್ರಮವಾಗಿ ಸೋಂಕು ಹರಡದಂತೆ ಸಹಕರಿಸಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.ಮೂವರಿಗೆ ಸೋಂಕಿರುವ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್  ಪ್ರಕಟಣೆ ಹೊರಡಿಸಿದ್ದು, ಇದರ ಬೆನ್ನಲ್ಲೇ ಸಚಿವರು ಈ ಕುರಿತು ದೃಢಪಡಿಸಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್​, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ತುರ್ತು ಸಭೆಗೆ ಮುಂದಾಗಿದ್ದಾರೆ. ಮೂಲಗಳ ಪ್ರಕಾರ, ಅಮೆರಿಕಾದಿಂದ ವಾಪಸಾಗಿದ್ದ ಟೆಕ್ಕಿಯ ಹೆಂಡತಿ, ಮಗಳು ಮತ್ತು ಸಹೋದ್ಯೋಗಿಗಳಿಗೂ ಸೋಂಕು ತಗುಲಿದೆ ಎನ್ನಲಾಗಿದೆ.

ಟೆಕ್ಕಿ ಭಾರತಕ್ಕೆ ವಾಪಸಾದ ನಂತರ ಯಾರ್ಯಾರನ್ನು ಭೇಟಿ ಮಾಡಿದ್ದರೋ ಅವರೆಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಉನ್ನತ ಮಟ್ಟದ ಸಭೆ
ಟೆಕ್ಕಿ ಜೊತೆ ಪ್ರಯಾಣ ಬೆಳಸಿದ್ದ ಅವರ ಪತ್ನಿ, ಮಗಳು ಹಾಗೂ ಸಹೋದ್ಯೋಗಿಗೆ ಸೋಂಕಿರುವುದು ದೃಢವಾಗಿದೆ. ಅವರು ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್​ ತಿಳಿಸಿದರು.

ನಾಲ್ವರಿಗೆ ಸೋಂಕಿರುವುದು ದೃಢಪಟ್ಟ ಹಿನ್ನೆಲೆ ಇಂದು ಸಿಎಂ ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಮಧ್ಯಾಹ್ನ 2.30ಕ್ಕೆ ಸಭೆ ನಡೆಸಲಾಗುವುದು. ಆರೋಗ್ಯ ಸಚಿವ ಬಿ ಶ್ರೀರಾಮುಲು, ಉನ್ನತ ಮಟ್ಟದ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಕೂಡ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದಾದ ಬಳಿಕ ಸಂಜೆ ನಾಲ್ಕು ಗಂಟೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ