ನವದೆಹಲಿ: ಭಾರತಕ್ಕೂ ನೊವೆಲ್ ಕೊರೊನಾ ಕಾಲಿಟ್ಟಿದ್ದು, ಈ ವೈರಸ್ ಪೀಡಿತರ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೇರಳದಲ್ಲಿ ಹೊಸ ಐದು ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕು ತಗುಲಿದವರ ಸಂಖ್ಯೆ ಭಾರತದಲ್ಲಿ 39ಕ್ಕೆ ಏರಿಕೆ ಆಗಿದೆ.
ಕೇರಳದಲ್ಲಿ ಕೊರೊನಾ ವೈರಸ್ ತಗುಲಿದ ಐದು ಜನರು ಒಂದೇ ಕುಟುಂಬದವರಾಗಿದ್ದಾರೆ. ಈ ಐವರ ಪೈಕಿ ಮೂವರು ಈ ಮೊದಲು ಇಟಲಿಗೆ ತೆರಳಿದ್ದರು. ಈ ವೇಳೆ ಅವರಿಗೆ ಕೊರೊನಾ ವೈರಸ್ ತಗುಲಿರಬಹುದು ಎಂದು ಶಂಕಿಸಲಾಗಿದೆ. ಇವರನ್ನು ಸಂಪರ್ಕಿಸಿದ ಎಲ್ಲರನ್ನೂ ಸದ್ಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಮಂಗಳವಾರ ದೇಶಾದ್ಯಂತ ಹೋಳಿ ಆಚರಣೆ ಮಾಡಲಾಗುತ್ತಿದೆ. ಆದರೆ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೆಹಲಿ ಸೇರಿದಂತೆ ಅನೇಕ ಭಾಗದಲ್ಲಿ ಹೋಳಿ ಆಚರಣೆಗೆ ಬ್ರೇಕ್ ನೀಡಲು ನಿರ್ಧರಿಸಲಾಗಿದೆ. ಇನ್ನು, ಚಿಕನ್, ಮಟನ್ ಹಾಗೂ ಸಮುದ್ರ ಆಹಾರ ತಿನ್ನುವುದರಿಂದ ಕೊರೊನಾ ಬರುತ್ತದೆ ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ, ಈ ರೀತಿ ಆಹಾರಗಳ ಸೇವನೆಯಿಂದ ಕೊರೊನಾ ಬರುವುದಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಕೊರೋನಾ ವೈರಸ್ ವಿಶ್ವಾದ್ಯಂತ ವೇಗವಾಗಿ ಪಸರಿಸುತ್ತಿದೆ. ಚೀನಾದಲ್ಲೇ ಹೆಚ್ಚಾಗಿ ಆರ್ಭಟಿಸುತ್ತಿರುವ ಈ ವೈರಸ್ ಈಗಾಗಲೇ 90ಕ್ಕೂ ಹೆಚ್ಚು ದೇಶಗಳಿಗೆ ಅಡಿ ಇಟ್ಟಿದೆ. ವೈರಸ್ನ ಸೋಂಕಿಗೆ ಒಳಗಾದವರ ಸಂಖ್ಯೆ 1 ಲಕ್ಷ ದಾಟಿದೆ. ಸಾವನ್ನಪ್ಪಿದವರ ಸಂಖ್ಯೆ 3,400ಕ್ಕೂ ಹೆಚ್ಚು. ‘