ನವದೆಹಲಿ: ಭಾರತದಲ್ಲಿರುವ 15 ಮಂದಿ ಇಟಲಿ ಪ್ರವಾಸಿಗರಿಗೆ ಕೊರೊನಾ ಸೊಂಕು ತಗುಲಿದೆ ಎಂದು ಬುಧವಾರ ನವದೆಹಲಿಯ ಏಮ್ಸ್ ಆಸ್ಪತ್ರೆ ಅಧಿಕೃತವಾಗಿ ತಿಳಿಸಿದೆ.
ಇಟಲಿಯಿಂದ ಬಂದ 21 ಮಂದಿಯನ್ನು ಪರೀಕ್ಷಿಸಲಾಗಿದ್ದು ಇದರಲ್ಲಿ 15 ಮಂದಿ ರಕ್ತದ ಮಾದರಿಯಲ್ಲಿ ಕೊರೊನಾ ಪಾಸಿಟಿವ್ ಅಂಶ ಕಂಡುಬಂದಿದೆ. ಇಟಲಿಯ ಪ್ರವಾಸಿಗರ ಗುಂಪಿನ ಸದಸ್ಯರನ್ನು ದೆಹಲಿಯ ಐಟಿಬಿಪಿ(ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್) ಕೇಂದ್ರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೈಪುರಕ್ಕೆ ಆಗಮಿಸಿದ ಇಟಲಿಯ ಪ್ರವಾಸಿಗನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆತನ ಪತ್ನಿಗೂ ಕೊರೊನಾ ವೈರಸ್‍ನ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡಿತ್ತು. ಈ ದಂಪತಿ ರಾಜಸ್ಥಾನ ಪ್ರವಾಸ ಮಾಡುವ ಈ ಪ್ರವಾಸಿ ಗುಂಪಿನ ಭಾಗವಾಗಿದ್ದರು.
ಈ ಕಾರಣದಿಂದ ಪ್ರವಾಸಿಗರು ದೆಹಲಿಗೆ ಬರುತ್ತಿದ್ದಂತೆ ಏಮ್ಸ್ ಆಸ್ಪತ್ರೆ ಸಿಬ್ಬಂದಿ ರಕ್ತದ ಮಾದರಿಯನ್ನು ಪಡೆದು ಪರಿಶೀಲಿಸಿದಾಗ ಕೊರೊನಾ ಇರುವುದು ಪತ್ತೆಯಾಗಿದೆ. ಸದ್ಯ ಈ ಎಲ್ಲ ಕೊರೊನಾ ಪೀಡಿತರನ್ನು ಮಂಗಳವಾರ ಮಧ್ಯಾಹ್ನದಿಂದ ಐಟಿಬಿಪಿಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ಪತ್ತೆಯಾದ ಇಟಲಿ ದಂಪತಿ ರಾಜಸ್ಥಾನದ 5 ಗ್ರಾಮಗಳಲ್ಲಿ ಸುತ್ತಾಡಿದ್ದಾರೆ. ಹೀಗಾಗಿ ಈ ಗ್ರಾಮದಲ್ಲಿ ಇವರನ್ನು ಸಂಪರ್ಕಿಸಿರುವ ವ್ಯಕ್ತಿಗಳಿಗೂ ಕೊರೊನಾ ತಗಲುವ ಸಾಧ್ಯತೆಯಿದೆ.
ಮಂಗಳವಾರದವರೆಗೂ ಭಾರತದಲ್ಲಿ 6 ಕೊರೊನಾ ವೈರಸ್ ಪ್ರಕರಣ ವರದಿ ಆಗಿತ್ತು. ಇದರಲ್ಲಿ ಕೇರಳದ ಮೂರು ಪ್ರಕರಣಗಳು ಸೇರಿದ್ದು, ಅವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಈಗ ಮೂವರು ಸೌದಿ ಅರೇಬಿಯಾಗೆ ತೆರಳಿದ್ದಾರೆ. ದೆಹಲಿ ಮೂಲದ ವ್ಯಕ್ತಿಗೆ ಕೊರೊನಾ ಇರುವುದು ಮಂಗಳವಾರ ದೃಢಪಟ್ಟಿತ್ತು.
ವ್ಯಕ್ತಿ ಆಯೋಜಿಸಿದ ತನ್ನ ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕೆಲವು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಹೀಗಾಗಿ ನೊಯ್ಡಾದಲ್ಲಿ ಎರಡು ಶಾಲೆಗಳಿಗೆ ಬೀಗ ಹಾಕಲಾಗಿದೆ. ವೈದ್ಯಕೀಯ ಮುಖ್ಯ ಅಧಿಕಾರಿಯೊಬ್ಬರು ಶಾಲೆಗೆ ಭೇಟಿ ನೀಡಿ ಶಾಲೆಯನ್ನು ಕೆಲ ದಿನಗಳ ಮುಚ್ಚುವಂತೆ ಸೂಚಿಸಿದ್ದರು. ಆದರೆ ಈ ಬಗ್ಗೆ ಗಾಬರಿಯಾಗಬೇಕಿಲ್ಲ ಎಂದು ತಿಳಿಸಿದ್ದರು.
ಬುಧವಾರ ಬೆಳಗ್ಗೆಯವರೆಗೆ ಭಾರತದಲ್ಲಿ 438 ಮಂದಿ ಕೊರೊನಾ ಶಂಕಿತರೆಂದು ವರದಿಯಾಗಿದೆ. ಅದರಲ್ಲಿ 225 ಜನರ ಮೇಲೆ 28 ದಿನಗಳ ಕಾಲ ತೀವ್ರ ನಿಗಾ ವಹಿಸಲಾಗಿತ್ತು. 189 ಮಂದಿ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. 89 ಮಂದಿಯನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 118 ಮಂದಿ ಕೊರೊನಾ ಪರೀಕ್ಷೆ ಮಾಡಿಸಿದ್ದು, 103 ಜನರ ವರದಿಯಲ್ಲಿ ನೆಗೆಟೀವ್ ಬಂದಿದ್ದು, 4 ಮಂದಿಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.