ಮುಂಬೈ: ಚೀನಾದಲ್ಲಿ ಉದ್ಭವಿಸಿದ ಕೊರೊನಾ ವೈರಸ್ ಇದೀಗ ವಿಶ್ವದ ಅನೇಕ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಚೀನಾ ಜರ್ಝರಿತಗೊಳ್ಳುತ್ತಿರುವುದು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿರುವುದು ಒಂದೆಡೆಯಾದರೆ, ಕೊರೊನಾ ವೈರಸ್ ವಿಶ್ವದ ಹಲವು ರಾಷ್ಟ್ರಗಳಲ್ಲಿ ಹರಡುವ ಭೀತಿ ಸೃಷ್ಟಿಸುತ್ತಿರುವುದು ಇನ್ನೊಂದೆಡೆ ಇದೆ. ಇದು ಜಾಗತಿಕವಾಗಿ ದುಷ್ಪರಿಣಾಮ ಬೀರುತ್ತಿದೆ. ಇದೇ ಕಾರಣಕ್ಕೆ ಭಾರತದ ಷೇರುಪೇಟೆ ಭಾರೀ ಕುಸಿತ ಕಾಣುತ್ತಿದೆ. ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ತೀವ್ರ ಕುಸಿತ ಕಾಣುತ್ತಿವೆ.
ಬಿಎಸ್ಇ ಸೆನ್ಸೆಕ್ಸ್ 1,100.27 ಅಂಕ (ಶೇ. 2.77) ಇಳಿಕೆಗೊಂಡು 38,645 ಮಟ್ಟ ತಲುಪಿದೆ. ಇನ್ನು, ಎನ್ಎಸ್ಇ ನಿಫ್ಟಿ ಶೇ. 2.83ರಷ್ಟು ಇಳಿಕೆ ಕಂಡಿದೆ. ನಿಫ್ಟಿ 329.50 ಪಾಯಿಂಟ್ ಕುಸಿತ ಕಂಡು 11,303.80 ಮಟ್ಟ ತಲುಪಿದೆ. ಬಜೆಟ್ ಆಸುಪಾಸಿನ ದಿನಗಳಲ್ಲಿ ಸೆನ್ಸೆಕ್ಸ್ 40 ಸಾವಿರ ಅಂಕಗಳ ಗಡಿದಾಟಿ ಹೋಗಿತ್ತು. ಇದೀಗ ನಿರಂತರ ಕುಸಿತ ಕಾಣುತ್ತಿದೆ.
ಕೊರೊನಾ ವೈರಸ್ ಭೀತಿಯೇ ಈ ಪರಿ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿನಿಂದ ಬಲಿಯಾಗುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿರುವುದು ಹೂಡಿಕೆದಾರರನ್ನು ತಲ್ಲಣಗೊಳಿಸಿದೆ. ಚೀನಾದ ಅನೇಕ ಕಡೆ ಬಹಳಷ್ಟು ಕಂಪನಿಗಳನ್ನು ಮುಚ್ಚಲಾಗಿದೆ. ಉತ್ಪಾದನೆ ಬಹುತೇಕ ನಿಂತುಹೋಗಿದೆ. ಚೀನಾದ ಉತ್ಪನ್ನಗಳನ್ನು ನಂಬಿಕೊಂಡಿರುವ ಹಲವ ರಾಷ್ಟ್ರಗಳಿಗೂ ಹೊಡೆತಬೀಳುತ್ತಿದೆ. ಹೀಗಾಗಿ, ಷೇರುಪೇಟೆಯ ಹೂಡಿಕೆದಾರರು ಗಾಬರಿಗೊಂಡು ಆತುರಾತುರವಾಗಿ ತಮ್ಮ ಹೂಡಿಕೆ ಹಿಂಪಡೆಯುತ್ತಿರಬಹುದೆನ್ನಲಾಗಿದೆ.
ಒಂದು ಅಂದಾಜು ಪ್ರಕಾರ, ಷೇರುಪೇಟೆಯಲ್ಲಿ ಬಂಡವಾಳ ಹಾಕಿರುವ ಹೂಡಿಕೆದಾರರು ಸುಮಾರು 5 ಲಕ್ಷ ಕೋಟಿ ರೂಪಾಯಿ ಹಣ ನಷ್ಟ ಮಾಡಿಕೊಂಡಿದ್ಧಾರೆ. ಟಾಟಾ ಸ್ಟೀಲ್, ಟೆಕ್ ಮಹೀಂದ್ರ, ಇನ್ಫೋಸಿಸ್, ಮಹೀಂದ್ರ ಅಂಡ್ ಮಹೀಂದ್ರ, ಬಜಾಜ್ ಫೈನಾನ್ಸ್, ಹೆಚ್ಸಿಎಲ್ ಟೆಕ್ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗಳ ಷೇರುಗಳು ಕಡಿಮೆ ಬೆಲೆಗೆ ಬಿಕರಿಯಾಗುತ್ತಿವೆ.
ಮುಂಬರುವ ದಿನಗಳಲ್ಲಿ ಷೇರುಪೇಟೆ ಇನ್ನಷ್ಟು ಕುಸಿತ ಕಾಣುವ ಭೀತಿ ಇದೆ. ಕೊರೊನಾ ವೈರಸ್ ಹತೋಟಿಗೆ ಬಂದು ಆರ್ಥಿಕತೆಗಳು ಚೇತರಿಕೆ ಕಾಣುವ ಲಕ್ಷಣ ತೋರುವವರೆಗೂ ಇದೇ ಕಥೆ ಮುಂದುವರಿಯುವ ಸಾಧ್ಯತೆ ಇದೆ. ಡಿಸೆಂಬರ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಿಕತೆ ಎಷ್ಟು ಪ್ರಗತಿ ಹೊಂದಿದೆ ಎಂಬ ಅಂಕಿಅಂಶ ಬಿಡುಗಡೆ ಬಳಿಕ ಚಿತ್ರಣ ಮತ್ತಷ್ಟು ಸ್ಪಷ್ಟವಾಗಲಿದೆ. ಆರ್ಥಿಕ ಪ್ರಗತಿ ಸಕಾರಾತ್ಮಕವಾಗಿದ್ದರೆ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಲಿದೆ. ಒಂದು ವೇಳೆ ಇನ್ನಷ್ಟು ಕುಸಿದಿದ್ದರೆ ಷೇರುಪೇಟೆ ಕುಸಿತದ ವೇಗ ಇನ್ನಷ್ಟು ಹೆಚ್ಚಾಗುವ ಭೀತಿ ಇದೆ.ಇದೇ ವೇಳೆ, ಜಾಗತಿಕವಾಗಿ ವಿವಿಧ ಷೇರುಪೇಟೆಗಳೂ ತಲ್ಲಣಗೊಂಡಿವೆ. ಅಮೆರಿಕ, ಯೂರೋಪ್ನ ಷೇರುಮಾರುಕಟ್ಟೆ ಇಳಿಕೆಯ ಹಂತದಲ್ಲಿವೆ. ಜಾಗತಿಕ ತೈಲ ಬೆಲೆಗಳು ಇಳಿಯುತ್ತಿವೆ. ಇದು ಶುಭ ಮತ್ತು ಅಶುಭ ಎರಡಕ್ಕೂ ಸೂಚಕವಾಗಿದೆ. ಪೆಟ್ರೋಲ್ ಬೆಲೆಗಳು ಇಳಿಕೆ ಕಾಣಬಹುದು.