ಅಮೆರಿಕವನ್ನು ನೀವು ಉತ್ತಮವಾಗಿ ನಡೆಸಿಕೊಂಡಿಲ್ಲ: ಭಾರತ ಭೇಟಿಗೂ ಮೊದಲು ಡೊನಾಲ್ಡ್​ ಟ್ರಂಪ್​ ಅಸಮಾಧಾನ

ನವದೆಹಲಿ:  ತಿಂಗಳಾಂತ್ಯದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ವೇಳೆ ಕೆಲ ಮಹತ್ವದ ದ್ವಿಪಕ್ಷೀಯ ಒಪ್ಪಂದಗಳು ನಡೆಯಲಿವೆ ಎನ್ನಲಾಗಿತ್ತು. ಆದರೆದೊಡ್ಡ ಪ್ರಮಾಣದ ಯಾವುದೇ ಒಪ್ಪಂದಗಳು ನಡೆಯುವುದು ಅನುಮಾನ ಎನ್ನಲಾಗಿದೆ.

ಡೊನಾಲ್ಡ್ ಟ್ರಂಪ್ ಭಾರತದ ಭೇಟಿಯ ವೇಳೆ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧ ಮತ್ತಷ್ಟು ವೃದ್ಧಿಯಾಗಲಿದೆ. ಸುಂಕ ಕಡಿತ ಮತ್ತು ಇತರೆ ರಿಯಾಯಿತಿಗಳು ಬದಲಾಗಿ ವ್ಯಾಪಾರ ಆದ್ಯತೆಗಳು ಪುನಃ ಸ್ಥಾಪಿತವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈ ಬಾರಿಯ ಭೇಟಿ ವೇಳೆ ಯಾವುದೇ ಮಹತ್ವದ ಒಪ್ಪಂದ ನಡೆಯಲು ಸಾಧ್ಯವಿಲ್ಲ ಎಂದು  ಮೂಲಗಳು ತಿಳಿಸಿವೆ.

ಭಾರತದ ಭೇಟಿ ವೇಳೆ ಮಹತ್ವದ ಒಪ್ಪಂದ ನಡೆಯಲಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಟ್ರಂಪ್​, “ನಾವು ಭಾರತದ ಜೊತೆ ದೊಡ್ಡ ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಒಪ್ಪಂದ ಅಮೆರಿಕನ್ ಅಧ್ಯಕ್ಷೀಯ ಚುನಾವಣೆ ಮೊದಲು ನಡೆಯಲಿದೆಯೋ ಅಥವಾ ನಂತರವೋ ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ” ಎಂದರು. ಈ ಮೂಲಕ ಟ್ರಂಪ್ ಭೇಟಿಯ ವೇಳೆ ಮಹತ್ವದ ಒಪ್ಪಂದ ನಡೆಯುವುದು ಅನುಮಾನವಾಗಿದೆ. ಆದರೆ, ಒಪ್ಪಂದ ಆಗುವುದೇ ಇಲ್ಲ ಎಂಬುದೂ ಸ್ಪಷ್ಟವಾಗಿಲ್ಲ.

“ವ್ಯಾಪಾರ ಒಪ್ಪಂದ ವಿಚಾರದಲ್ಲಿ ಭಾರತ ನಮ್ಮನ್ನು ಉತ್ತಮವಾಗಿ ನಡೆಸಿಕೊಂಡಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಉತ್ತಮವಾಗಿದೆ. ಹೀಗಾಗಿ, ಭಾರತಕ್ಕೆ ಬರಲು ಉತ್ಸುಕನಾಗಿದ್ದೇನೆ” ಎಂದು ಟ್ರಂಪ್​ ಹೇಳಿದ್ದಾರೆ.

ಫೆಬ್ರವರಿ 24 ರಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಲಿದ್ದಾರೆ. ಮೊದಲು ಅವರು ಗುಜರಾತ್​ನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ಅಲ್ಲಿಂದ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಲು ಯೋಜನೆ ರೂಪಿಸಲಾಗಿದೆ. 2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ವೇಳೆ ನೀಡಿದ್ದಕ್ಕಿಂತ ದೊಡ್ಡ ಮಟ್ಟದ ಸ್ವಾಗತವನ್ನು ಡೊನಾಲ್ಡ್ ಟ್ರಂಪ್​ಗೆ ನೀಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ