ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ನಾಳೆ ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಕುಟುಂಬ ಸಮೇತ ಸತ್ಯಾಗ್ರಹ ನಡೆಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಸರ್ಕಾರಿ ಬಸ್ ಸೇವೆ ಸಂಚಾರದಲ್ಲಿ ವ್ಯತ್ಯಾಯವಾಗಲಿದ್ದು, ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮ ಮಂಡಳಿಗಳ ಬಸ್ಗಳು ರಸ್ತೆಗೆ ಇಳಿಯುವುದು ಬಹುತೇಕ ಅನುಮಾನವಾಗಿದೆ.
ಸುಮಾರು 20 ಸಾವಿರ ಸಾರಿಗೆ ಸಿಬ್ಬಂದಿ ತಮ್ಮ ಕುಟುಂಬ ಸಮೇತರಾಗಿ ನಾಳೆ ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸಲಿದ್ದಾರೆ. ಪಾಟೀಲ ಪುಟ್ಟಪ್ಪ ಹಾಗೂ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ನೌಕರರು ಮತ್ತವರ ಕುಟುಂಬ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ.
ಸರ್ಕಾರಿ ನೌಕರರು ಹಾಗೂ ನಿಗಮ ಮಂಡಳಿಗಳ ನೌಕರರ ವೇತನದಲ್ಲಿ ಶೇ 60ರಷ್ಟು ವ್ಯತ್ಯಾಸವಿದೆ. ಅಲ್ಲದೇ ಸರ್ಕಾರಿ ನೌಕರರಿಗೆ ಸಿಗುತ್ತಿರುವ ಸವಲತ್ತುಗಳು ಕೂಡ ನೀಡಲಾಗುತ್ತಿಲ್ಲ. ನಿಗಮಮಂಡಳಿಗಳು ಆರ್ಥಿಕ ತೊಂದರೆಯಲ್ಲಿರುವುದರಿಂದ ಈ ಸೌಲಭ್ಯ ನೀಡಲಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಮೂರು ಪಕ್ಷದ ನಾಯಕರುಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಈ ಕುರಿತು ಒತ್ತಾಯಿಸಿದ್ದೇವೆ. ಕಾಲ್ನಡಿಗೆ ಜಾಥ, ಬಿತ್ತಿ ಪತ್ರ ಚಳುವಳಿಗಳನ್ನು ನಡೆಸಲಾಗಿದೆ. ಆದರೂ ನಮ್ಮ ಬೇಡಿಕೆ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ನಾಳೆ ಕುಟುಂಬ ಸಮೇತ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಲು ಸಜ್ಜಾಗಿದ್ದೇವೆ ಎಂದು ಸಿಐಟಿಯು ಜಂಟಿ ಕಾರ್ಯದರ್ಶಿ ಆನಂದ್ ತಿಳಿಸಿದರು.
ಈ ಬಾರಿಯ ಬಜೆಟ್ನಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಅಂತ ಘೋಷಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆಯನ್ನು ಸಾರಿಗೆ ಸಿಬ್ಬಂದಿ ನೀಡಿದ್ದಾರೆ.
ನಾಳೆ ರಸ್ತೆಗಿಳಿಯಲ್ಲ ಬಸ್ಗಳು
ಪ್ರತಿಭಟನೆ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ತಮ್ಮ ಕುಟುಂಬವರ್ಗದವರ ಜೊತೆ ಈಗಾಗಲೇ ಬೆಂಗಳೂರಿನತ್ತ ಧಾವಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ನೌಕರರರು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್ ಆರ್ ಟಿ ಸಿ, ವಾಯವ್ಯ ಕರ್ನಾಟಕ ಸಾರಿಗೆ, ಈಶಾನ್ಯ ಕರ್ನಾಟಕ ಸಾರಿಗೆ ನೌಕರರು ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಬಸ್ ಸಂಚಾರ ಬಹುತೇಕ ಸ್ಥಗಿತವಾಗಲಿದೆ.
ಇನ್ನು, ನಾಳೆ ಬಸ್ಗಳ ಸಂಚಾರ ಬಹುತೇಕ ಸ್ಥಗಿತಗೊಳ್ಳುತ್ತಿರುವುದರಿಂದ ಉದ್ಭವಿಸಬಹುದಾದ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಬಸ್ ಸಂಚಾರ ಸ್ಥಗಿತಗೊಳ್ಳುವುದರಿಂದ ಜನಸಾಮಾನ್ಯರ ಓಡಾಟಕ್ಕೆ ತೊಂದರೆಯಾಗಲಿರುವ ಹಿನ್ನೆಲೆ ನಾಳೆ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿರಲು ಆಡಳಿತ ಮಂಡಳಿ ನಿರ್ಧಾರಿಸಿದೆ. ಅಲ್ಲದೇ, ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಡಿಪೋ ಮ್ಯಾನೇಜರ್ಗಳು ಮುಚ್ಚಳಿಕೆ ಕೂಡ ಬರೆಸಿಕೊಳ್ಳುತ್ತಿದ್ದಾರೆ.