ಹುಬ್ಬಳ್ಳಿ: ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ನಿನ್ನೆ ಕೋರ್ಟ್ ಆವರಣದಲ್ಲಿ ಆರೋಪಿಗಳ ಮೇಲೆ ಹಲ್ಲೆ ಯತ್ನ ನಡೆದ ಹಿನ್ನೆಲೆ, ಹುಬ್ಬಳ್ಳಿ ಉಪ ಕಾರಾಗ್ರಹದ ಸಿಬ್ಬಂದಿ ಈ ಕ್ರಮ ಕೈಗೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಸಹ ಖೈದಿಗಳು ಆರೋಪಿಗಳ ಮೇಲೆ ಹಲ್ಲೆ ನಡೆಸುವ ಸಾಧ್ಯತೆ ಇರುವ ಹಿನ್ನೆಲೆ, ಭದ್ರತೆಯ ದೃಷ್ಟಿಯಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ.
ದೇಶದ್ರೋಹಿ ಘೋಷಣೆ ಕೂಗಿ ಜೈಲು ಸೇರಿರುವ ಕಾಶ್ಮೀರಿ ವಿದ್ಯಾರ್ಥಿಗಳಾದ ತಾಲೀಬ್, ಆಮಿರ್ ಹಾಗೂ ಬಸೀತ್ ರಾತ್ರಿಯಿಡೀ ಭಯದಿಂದ ನಿದ್ದೆ ಮಾಡಲಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯ ಐವರು ಆರೋಪಿಗಳ ಜೊತೆಗೆ ಈ ಮೂವರನ್ನು ಸೆಲ್‌ನಲ್ಲಿ ಇರಿಸಲಾಗಿತ್ತು. ಮತ್ತೆ ತಮ್ಮ ಮೇಲೆ ಹಲ್ಲೆ ನಡೆಯುವ ಭಯದಿಂದಲೇ ಆರೋಪಿಗಳು ರಾತ್ರಿ ಕಳೆದಿದ್ದಾರೆ ಎನ್ನಲಾಗಿದೆ.
ನಿನ್ನೆ ಪೊಲೀಸರು ಈ ಮೂವರು ಆರೋಪಿಗಳನ್ನು ಹುಬ್ಬಳ್ಳಿ 3ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ ಆವರಣದಲ್ಲಿ ಸಾರ್ವಜನಿಕರು ಮತ್ತು ವಕೀಲರು ‘ದೇಶದ್ರೋಹಿಗಳಿಗೆ ಧಿಕ್ಕಾರ’ ಎಂದು ಕೂಗಿದ್ದರು. ಬಳಿಕ ಆರೋಪಿಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಪೊಲೀಸರ ವಾಹನಕ್ಕೆ ಕಲ್ಲು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.
ದೇಶದ್ರೋಹ ಆರೋಪ ಹೊತ್ತಿರುವ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸುವಂತೆ ಕೋರ್ಟ್ ಆದೇಶ ನೀಡಿದೆ.