ನವದೆಹಲಿ: ದೇಶದ ಜನನಿಬಿಡ ರೈಲ್ವೇ ನಿಲ್ದಾಣಗಳಿಗೆ ನೀಡಲಾಗಿರುವ ಉಚಿತ ವೈಫೈ ಸೌಲಭ್ಯವನ್ನು ಸ್ಥಗಿತಗೊಳಿಸಲು ಗೂಗಲ್ ನಿರ್ಧರಿಸಿದೆ. ಕಳೆದ ಐದು ವರ್ಷಗಳಿಗೆ ತುಲನೆ ಮಾಡಿದ್ರೆ ಡೇಟಾ ಬಳಕೆ ಅತ್ಯಂತ ಸರಳವಾಗಿ ಮತ್ತು ಕಡಿಮೆ ಬೆಲೆಯಲ್ಲಿ ಲಭ್ಯವಿದೆ ಎಂದು ಗೂಗಲ್ ತಿಳಿಸಿದೆ.
2015ರಂದು ಗೂಗಲ್ ರೈಲ್ವೇ ಇಲಾಖೆಯ ಸಹಭಾಗಿತ್ವದಲ್ಲಿ ಜನಿನಿಬಿಡ ನಿಲ್ದಾಣಗಳಲ್ಲಿ ಉಚಿತ ವೈಫೈ ವ್ಯವಸ್ಥೆಯ ಯೋಜನೆಯನ್ನು ಆರಂಭಿಸಿತ್ತು. ಅಂದಿನಿಂದ ಇಂದಿನವರೆಗೆ ಈ ಸೇವೆ 400 ರೈಲ್ವೇ ನಿಲ್ದಾಣಗಳಿಗೆ ವ್ಯಾಪಿಸಿದೆ. ಐಎಸ್ಪಿ, ದೂರಸಂಪರ್ಕ ಕಂಪನಿಗಳು ಮತ್ತು ಸ್ಥಳೀಯ ಅಧಿಕಾರಿಗಳ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿತ್ತು.
ಜೂನ್ 2018ರಲ್ಲಿಯೇ ನಾವು ನಮ್ಮ ಗುರಿಯನ್ನು ತಲುಪಿದ್ದೇವೆ. ವಿಶ್ವದ ಇತರೆ ದೇಶಗಳಿಗಿಂದ ಭಾರತದಲ್ಲಿ ಅತಿ ಕಡಿಮೆ ದರದಲ್ಲಿ ಡೇಟಾ ಲಭ್ಯವಿದೆ.
ಹಾಗಾಗಿ 2020ರೊಳಗೆ ಹಂತ ಹಂತವಾಗಿ ರೈಲ್ವೇ ನಿಲ್ದಾಣಗಳಲ್ಲಿ ನೀಡಿರುವ ಉಚಿತ ವೈಫೈ ವ್ಯವಸ್ಥೆಯನ್ನು ಕಡಿತಗೊಳಿಸುತ್ತವೆ. ಮುಂದಿನ ದಿನಗಳಲ್ಲಿಯೂ ರೈಲ್ವೇ ಇಲಾಖೆಯ ಇತರೆ ಸೇವೆಗಳಿಗೆ ಸಹಕಾರ ನೀಡುತ್ತೇವೆ ಎಂದು ಗೂಗಲ್ ಸಂಸ್ಥೆ ಯ ಪೇಮೆಂಟ್ ಮತ್ತು ನೆಕ್ಸ್ಟ್ ಬಿಲಿಯನ್ ಯೂಸರ್ಸ್ ವಿಭಾಗದ ಉಪಾಧ್ಯಕ್ಷ ಸೀಸರ್ ಸೆನ್ಗುಪ್ತಾ ತಿಳಿಸಿದ್ದಾರೆ.