ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಪೊಲೀಸರು ಇಂದು ಕೋರ್ಟ್ ಮುಂದೆ ಹಾಜರುಪಡಿಸುವ ವೇಳೆ ಹೈಡ್ರಾಮಾ ನಡೆದಿದೆ. ತಾಲಿಬ್ ಮಾಜಿದ್, ಆಮಿರ್ ವಾನಿ, ಬಾಷಿತ್ ಸೋಫಿ–ಈ ಮೂವರು ಆರೋಪಿಗಳನ್ನು ಕೋರ್ಟ್ ಬಳಿ ಕರೆತಂದಾಗ ವಕೀಲರು ಮತ್ತು ಸಾರ್ವಜನಿಕರು ‘ಭಾರತ್ ಮಾತಾ ಕಿ ಜೈ‘ ಘೋಷಣೆಯನ್ನು ಕೂಗಿದ್ದಾರೆ.
ಸಾರ್ವಜನಿಕರು ‘ದೇಶದ್ರೋಹಿಗಳಿಗೆ ಧಿಕ್ಕಾರ’ ಎಂದು ಆರೋಪಿಗಳು, ಪೊಲೀಸರ ಎದುರೇ ಜೋರಾಗಿಯೇ ಕೂಗಿದರು. ಈ ವೇಳೆ ಕಾಶ್ಮೀರಿ ವಿದ್ಯಾರ್ಥಿಗಳು ತಲೆತಗ್ಗಿಸಿ ಕೋರ್ಟ್ ಒಳಗೆ ಹೋದರು. ವಿಚಾರಣೆ ಮುಗಿಸಿಕೊಂಡು ಹೊರ ಬಂದ ಕೂಡಲೇ ಮೂವರು ವಿದ್ಯಾರ್ಥಿಗಳ ಮೇಲೆ ಸಾರ್ವಜನಿಕರು ಮತ್ತು ವಕೀಲರು ಹಲ್ಲೆಗೆ ಮುಂದಾದರು. ಪೊಲೀಸ್ ವಾಹನಕ್ಕೆ ಕಲ್ಲು ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಕೋರ್ಟ್ ಆವರಣದಲ್ಲೇ ಜನರು ರೊಚ್ಚಿಗೆದ್ದಿದ್ದರಿಂದ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಸಾರ್ವಜನಿಕರನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು.
ಹುಬ್ಬಳ್ಳಿ 3ನೇ ಜೆಎಂಎಫ್ಸಿ ಕೋರ್ಟ್ ಆರೋಪಿಗಳಿಗೆ 14 ದಿನಗಳ ಕಾಲ ಅಂದರೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಿ ಆದೇಶ ನೀಡಿದೆ. ಮೂವರು ಆರೋಪಿಗಳು ವಕೀಲರನ್ನು ನೇಮಿಸಿಕೊಳ್ಳಲು ಕಾಲಾವಕಾಶ ಕೋರಿದ್ದಾರೆ. ಹುಬ್ಬಳ್ಳಿ ಕೋರ್ಟ್ ಸುತ್ತ ಬಿಗಿ ಪೊಲೀಸ್ ಬಿಗಿ ಬಂದೋ ಬಸ್ತ್ ಏರ್ಪಡಿಸಿದ್ದರೂ ಈ ಕಲಹ ಉಂಟಾಗಿತ್ತು.