ನವದೆಹಲಿ, ಫೆ.13-ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಅಪರಾಧ ಪ್ರಕರಣಗಳ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ಇಂದು ಕಟ್ಟಪ್ಪಣೆ ಮಾಡಿದೆ.
ಉಮೇದುವಾರರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಸಂಪೂರ್ಣ ವಿವರಗಳನ್ನು ತನ್ನ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡುವಂತೆ ನ್ಯಾಯಮೂರ್ತಿ ಆರ್. ಎಫ್. ನಾರಿಮನ್ ನೇತೃತ್ವದ ಪೀಠವು ಎಲ್ಲ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದೆ.
ಅಪರಾಧ ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ ಅಭ್ಯರ್ಥಿಗಳನ್ನು ಚುನಾವಣಾ ಸ್ಪರ್ಧೆಗೆ ಆಯ್ಕೆ ಮಾಡಲು ಕಾರಣಗಳನ್ನು ಸಹ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವಂತೆಯೂ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಕೇವಲ ಗೆಲ್ಲುವ ಸಾಮಥ್ರ್ಯವನ್ನು ಮಾತ್ರ ಉಲ್ಲೇಖಿಸದೇ ಇಂಥ ಉಮೇದುವಾರರ ಆಯ್ಕೆಗೆ ವಿದ್ಯಾರ್ಹತೆಗಳು ಮತ್ತು ಆರ್ಹತೆಗಳ ಸೂಕ್ತ ಉಲ್ಲೇಖದೊಂದಿಗೆ ಸಮರ್ಥನೀಯವಾಗಿರಬೇಕು ಎಂದು ಕೋರ್ಟ್ ಸೂಚಿಸಿದೆ.
ಕಳೆದ ನಾಲ್ಕು ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜಕೀಯ ಅಪರಾಧೀಕರಣ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ ಎಂದು ನ್ಯಾಯಪೀಠವು ಕಳವಳ ವ್ಯಕ್ತಪಡಿಸಿತು.
ಅಪರಾಧ ಹಿನ್ನೆಲೆ ಇರುವ ಮತ್ತು ಅಪರಾಧ ಪ್ರಕರಣಗಳು ಬಾಕಿ ಇರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೆ 72 ಗಂಟೆಗಳ ಒಳಗೆ ಈ ಕುರಿತು ಚುನಾವಣಾ ಆಯೋಗಕ್ಕೆ ವರದಿಯನ್ನು ಸಲ್ಲಿಸುವಂತೆಯೂ ಸುಪೀಂಕೋರ್ಟ್ ಸೂಚಿಸಿದೆ.
ಫೇಸ್ಬುಕ್ ಮತ್ತು ಟ್ವೀಟರ್ನಂಥ ಸೋಷಿಯಲ್ ಮೀಡಿಯಾದಲ್ಲಿ ಈ ವಿವರಗಳನ್ನು ಪ್ರಕಟಿಸಬೇಕು ಹಾಗೂ ಒಂದು ಸ್ಥಳೀಯ ಮತ್ತು ಒಂದು ರಾಷ್ಟ್ರೀಯ ದಿನಪತ್ರಿಕೆಯಲ್ಲಿ ಈ ವಿವರಗಳನ್ನು ಮುದ್ರಿಸಬೇಕೆಂದೂ ಸಹ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.
ತಾನು ನೀಡಿದ ಸೂಚನೆಗಳು ಮತ್ತು ನಿರ್ದೇಶನಗಳಿಗೆ ಬದ್ದವಾಗಲು ರಾಜಕೀಯ ಪಕ್ಷಗಳು ವಿಫಲವಾದಲ್ಲಿ ಅದನ್ನು ತನ್ನ ಗಮನಕ್ಕೆ ತರುವಂತೆಯೂ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ತಾನು ನೀಡಿ ತೀರ್ಪುಗಳು ಮತ್ತು ಆದೇಶಗಳನ್ನು ಪಾಲಿಸಲು ರಾಜಕೀಯ ಪಕ್ಷಗಳು ವಿಫಲವಾದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ಸರ್ವೋನ್ನತ ನ್ಯಾಯಾಲಯ ತಿಳಿಸಿದೆ.
ತಮ್ಮ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಅಭ್ಯರ್ಥಿಗಳಿಂದ ಮಾಹಿತಿ ಬಹಿರಂಗಗೊಳಿಸಬೇಕೆಂಬ ಕುರಿತು 2018ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ರಾಜಕೀಯ ಪಕ್ಷಗಳು ಪಾಲಿಸುತ್ತಿಲ್ಲ. ಇದರಿಂದ ನ್ಯಾಯಾಂಗ ನಿಂದನೆಯಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ಸಂಬಂಧ ಸುಪ್ರೀಂಕೋರ್ಟ್ ಈ ಆದೇಶಗಳನ್ನು ನೀಡಿದೆ.