
ಲಖ್ನೋ,ಫೆ.13- ಉತ್ತರಪ್ರದೇಶದ ರಾಜಧಾನಿ ಲಕ್ನೋದ ವಜಿರ್‍ಗಂಜ್ ಸಿವಿಲ್ ನ್ಯಾಯಾಲಯದಲ್ಲಿ ಇಂದು ಮಧ್ಯಾಹ್ನ ಬಾಂಬ್ ಸ್ಫೋಟ ಸಂಭವಿಸಿದ್ದು ವಕೀಲರು ಸೇರಿ ಕೆಲವರು ಗಾಯಗೊಂಡಿದ್ದಾರೆ.
ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟಗೊಂಡು ಭಯಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ವಿವಾದವೊಂದರ ವಿಚಾರಣೆ ಸಂದರ್ಭದಲ್ಲಿ ವಾದಿ ಮತ್ತು ಪ್ರತಿವಾದಿ ಪರ ವಕೀಲರು ಕೋರ್ಟ್ ಹಾಲ್ ಸಮೀಪ ಇದ್ದ ಸಂದರ್ಭದಲ್ಲೇ ಈ ಬಾಂಬ್ ಸ್ಫೋಟಗೊಂಡಿತು. ವಕೀಲರನ್ನೇ ಗುರಿಯಾಗಿಸಿಕೊಂಡು ಈ ಕೃತ್ಯ ವೆಸಗಲಾಗಿದೆ ಎಂದು ಶಂಕಿಸಲಾಗಿದೆ.
ತನ್ನ ಪ್ರತಿವಾದಿ ಪರ ವಕೀಲರನ್ನು ಗುರಿಯಾಗಿಟ್ಟುಕೊಂಡು ಜೀತು ಯಾದವ್ ಎಂಬಾತ ನಾಡಬಾಂಬ್ ಎಸೆದಿರುವುದು ದೃಢಪಟ್ಟಿದೆ. ಕಡಿಮೆ ತೀವ್ರತೆಯ ಈ ಕಚ್ಚಾ ಬಾಂಬ್‍ನ್ನು ಸ್ಥಳೀಯವಾಗಿ ತಯಾರಿಸಲಾಗಿತ್ತು ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ತಿಳಿಸಿದ್ದಾರೆ.
ವಜಿರ್‍ಗಂಜ್ ಠಾಣೆ ಪೊಲೀಸರು ತಕ್ಷಣ ಕಾರ್ಯ ಪ್ರವೃತರಾಗಿ ಕೋರ್ಟ್ ಆವರಣದಲ್ಲೇ ಇದ್ದ ಇನ್ನೂ ಮೂರು ಕಚ್ಚಾ ಬಾಂಬ್‍ನ್ನು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದಾರೆ. ಇದರಿಂದ ಸಂಭವಿಸಬಹುದಾದ ಅನಾಹುತ ತಪ್ಪಿದಂತಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಕುರಿತು ತನಿಖೆ ಕೈಗೊಳ್ಳಲು ಆದೇಶಿಸಲಾಗಿದೆ.
ನಾಡಬಾಂಬ್ ಸ್ಫೋಟದಿಂದ ಕೋರ್ಟ್ ಆವರಣದಲ್ಲಿ ಕೆಲಕಾಲ ಭಾರೀ ಆತಂಕ ಸೃಷ್ಟಿಯಾಗಿ ಕಲಾಪಗಳಿಗೆ ಅಡ್ಡಿಯಾಯಿತು. ಮಹಿಳಾ ವಕೀಲರು ಸೇರಿದಂತೆ ಇತರ ನ್ಯಾಯವಾದಿಗಳು ಮತ್ತು ಕೋರ್ಟ್ ಆವರಣದಲ್ಲಿದ್ದ ಜನರು ಭಯಭೀತರಾಗಿದ್ದರು.
ನ್ಯಾಯಾಲಯದಲ್ಲಿ ವಕೀಲರ ಮೇಲೆ ಹಲ್ಲೆ ಮತ್ತು ಹತ್ಯೆ ಪ್ರಕರಣಗಳು ಮರುಕಳಿಸುತ್ತಿರುವ ಸಂದರ್ಭದಲ್ಲೇ ಲಖ್ನೋ ಕೋರ್ಟ್ ಆವರಣದಲ್ಲಿ ನಡೆದ ಈ ಘಟನೆಯನ್ನು ವಕೀಲರ ಸಂಘ ಖಂಡಿಸಿದೆ.
ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.