ಬೆಂಗಳೂರು, ಫೆ.12-ಬಿಬಿಎಂಪಿಯಲ್ಲಿ ಏನು ಬೇಕಾದರೂ ನಡೆಯಬಹುದು. ಸತ್ತವರು ಬದುಕಬಹುದು, ಬದುಕಿರುವವರು ಸಾಯಬಹುದು, ಮನೆಗಳೇ ಅದಲು-ಬದಲಾಗಬಹುದು, ರಸ್ತೆಗಳೇ ಮನೆಗಳಾಗಬಹುದು. ಈ ಹಗರಣಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.
ಗುತ್ತಿಗೆ ನಿರ್ವಹಣೆಯ ಹಣವನ್ನೇ ನಕಲಿ ವ್ಯಕ್ತಿಗಳು ಲಪಟಾಯಿಸಿ ಪ್ರಾಮಾಣಿಕವಾಗಿ ಹಾಕಿರುವ ಪ್ರಕರಣ ಬಿಬಿಎಂಪಿಯಲ್ಲಿ ನಡೆದಿದೆ. ಈ ಕುರಿತಂತೆ ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿ ಗೋವಿಂದರಾಜು ಪೋಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.
ಪ್ರಕರಣದ ವಿವರ:
ಸರ್ವಜ್ಞ ನಗರದ ನಿವಾಸಿ ಚಂದ್ರಪ್ಪ ಎಂಬ ಗುತ್ತಿಗೆದಾರರು ಬಿಬಿಎಂಪಿಯಿಂದ ಸುಮಾರು 4 ಕೋಟಿ ರೂ. ಕಾಮಗಾರಿ ಗುತ್ತಿಗೆ ಪಡೆದು ಕೆಲಸ ನಿರ್ವಹಿಸಿದರು. ಬಿಬಿಎಂಪಿಯಲ್ಲಿ ಗುತ್ತಿಗೆ ಬಿಲ್ ಪಾವತಿಯಾಗಲು ಸಾಕಷ್ಟು ಸಮಯ ಹಿಡಿಯಲಿದೆ. ಆ ಅಂದಾಜಿನ ಪ್ರಕಾರ ಚಂದ್ರಪ್ಪ ಅವರ ಹಣ ಆರು ತಿಂಗಳ ನಂತರ ಬರುವುದಿತ್ತು. ಹಾಗಾಗಿ ಅವರು ಬಿಬಿಎಂಪಿಗೆ ಬಂದು ವಿಚಾರಿಸುವ ಪ್ರಯತ್ನ ಮಾಡಿರಲಿಲ್ಲ.
ಸೀನಿಯಾರಿಟಿ ಹತ್ತಿರ ಬಂದಿದ್ದರಿಂದ ಇತ್ತೀಚೆಗೆ ಮೂಲದಾಖಲೆಗಳ ಸಮೇತ ಬಿಬಿಎಂಪಿಗೆ ಬಂದ ಚಂದ್ರಪ್ಪ ಅವರು, ಕಾಮಗಾರಿ ಹಣ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ ಪಾಲಿಕೆ ದಾಖಲೆಗಳಲ್ಲಿ ಚಂದ್ರಪ್ಪ ಅವರಿಗೆ ಈಗಾಗಲೇ 4 ಕೋಟಿ ಹಣ ಪಾವತಿಯಾಗಿರುವುದಾಗಿ ಉಲ್ಲೇಖಿಸಲಾಗಿದೆ.
ಇದನ್ನು ಕೇಳಿ ದಿಗ್ಭ್ರಾಂತಗೊಂಡ ಚಂದ್ರಪ್ಪ ಅವರು, ಗಲಾಟೆ ಮಾಡಿದಾಗ ನಕಲಿಗಳ ಕರಾಮತ್ತು ಬೆಳಕಿಗೆ ಬಂದಿದೆ. ಚಂದ್ರಪ್ಪ ಅವರಂತೆಯೇ ಸಹಿ ಮಾಡಿ ನಕಲಿ ಪತ್ರ ಬರೆದು ಅದಕ್ಕೆ ಬಿಬಿಎಂಪಿ ಆಯುಕ್ತರಿಂದ ಸಹಿ ಮಾಡಿಸಿ ಬ್ಯಾಂಕ್ವೊಂದರ ಖಾತೆಗೆ ಹಣ ಹಾಕಲಾಗಿದೆ. ಹಣ ಸಂದಾಯವಾದ ಎರಡು ನಿಮಿಷದಲ್ಲೇ 4 ಕೋಟಿಯೂ ಡ್ರಾ ಆಗಿದೆ.
ಬಿಬಿಎಂಪಿಯಲ್ಲಿ ತುರ್ತು ಸಂದರ್ಭಗಳಲ್ಲಿ ಸೀನಿಯಾರಿಟಿಯನ್ನು ಬದಿಗೆ ಸರಿಸಿ ಮೂರ್ನಾಲ್ಕು ತಿಂಗಳು ಮೊದಲೇ ಹಣ ಬಿಡುಗಡೆ ಮಾಡುವ ಪದ್ಧತಿಯೊಂದು ಜಾರಿಯಲ್ಲಿದೆ. ಇದನ್ನು ಬಳಸಿಕೊಂಡು ನಕಲಿ ಪತ್ರ ತಯಾರಿಸಿದ್ದು, ಬಿಬಿಎಂಪಿ ಆಯುಕ್ತರನ್ನೂ ಕೂಡ ದಿಕ್ಕು ತಪ್ಪಿಸಲಾಗಿದೆ. ಪ್ರಕರಣ ನಮ್ಮ ಗಮನಕ್ಕೆ ಬರದೆ ನಡೆದಿದೆ ಎಂದು ಲೆಕ್ಕಾಧಿಕಾರಿ ಗೋವಿಂದರಾಜು ಹೇಳಿದ್ದು, ಈ ಕುರಿತು ಪೋಲೀಸ್ ಠಾಣೆಗೆ ದೂರು ನೀಡುವುದಾಗಿ ಹೇಳಿದ್ದಾರೆ.
ಬಿಬಿಎಂಪಿ ಅಧಿಕಾರಿಗಳಾದ ಅನಿತಾ ಮತ್ತು ರಾಮಮೂರ್ತಿ ಎಂಬುವರ ಮೇಲೆ ಅನುಮಾನಗಳು ವ್ಯಕ್ತವಾಗಿವೆ. ನಕಲಿ ದಾಖಲೆ ಸೃಷ್ಟಿಸಿದ ವ್ಯಕ್ತಿಯ ಹುಡುಕಾಟ ಕೂಡ ನಡೆಯುತ್ತಿದೆ. ಈ ರೀತಿ ಎಷ್ಟು ಪ್ರಕರಣಗಳಲ್ಲಿ ಹಣ ಡ್ರಾ ಆಗಿದೆಯೋ ಎಂಬ ಗೋಜಲು ಶುರುವಾಗಿದ್ದು, ಯಾವುದಕ್ಕೂ ಗುತ್ತಿಗೆದಾರರು ಸೀನಿಯಾರಿಟಿಗಾಗಿ ಕಾಯುತ್ತಾ ಕೂರದೆ ಕೂಡಲೇ ಬಿಬಿಎಂಪಿಗೆ ಭೇಟಿ ನೀಡಿ ತಮ್ಮ ಪಾಲಿನ ಹಣ ಉಳಿದಿದೆಯೋ, ಡ್ರಾ ಆಗಿದೆಯೋ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ.