ಬೆಂಗಳೂರು: ವಿಧಾನಸಭಾ ಉಪಚುನಾವಣೆ ಫಲಿತಾಂಶ ಪ್ರಕಟವಾಗಿ 2 ತಿಂಗಳ ನಂತರ ಬಿಜೆಪಿಯ ವಲಸಿಗ ಶಾಸಕರಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ. ಉಪ ಚುನಾವಣೆಯಲ್ಲಿ ಗೆಲುವು ಕಂಡಿರುವ 10 ಶಾಸಕರಿಗೆ ಸಚಿವ ಸ್ಥಾನ ನೀಡಿ, ಖಾತೆ ಹಂಚಿಕೆಯನ್ನೂ ಮಾಡಲಾಗಿದೆ. ಆದರೂ ಬಿಜೆಪಿಯಲ್ಲಿ ಅಸಮಾಧಾನ ಕಡಿಮೆಯಾಗಿಲ್ಲ. ಖಾತೆ ಹಂಚಿಕೆ ವೇಳೆ ತಮಗೆ ಸಿಕ್ಕಿದ್ದ ಅರಣ್ಯ ಇಲಾಖೆ ಬಗ್ಗೆ ತಗಾದೆ ತೆಗೆದಿದ್ದ ಬಿ.ಸಿ. ಪಾಟೀಲ್ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಕೊನೆಗೂ ಅವರ ಬೇಡಿಕೆಗೆ ಮಣಿದಿರುವ ಸಿಎಂ ಯಡಿಯೂರಪ್ಪ ಅರಣ್ಯ ಖಾತೆಯ ಬದಲು ಕೃಷಿ ಖಾತೆ ನೀಡಿದ್ದಾರೆ.
ಬಿಜೆಪಿ ಶಾಸಕ ಬಿ.ಸಿ. ಪಾಟೀಲ್ ತಮಗೆ ಸಿಕ್ಕ ಅರಣ್ಯ ಇಲಾಖೆಯ ಜವಾಬ್ದಾರಿಯ ಬಗ್ಗೆ ಅಸಮಾಧಾನಗೊಂಡಿದ್ದರು. ತಮ್ಮ ಖಾತೆಯ ಬದಲಾವಣೆಗೆ ಸಿಎಂ ಬಳಿ ಪಟ್ಟು ಹಿಡಿದಿದ್ದರು. ಈ ಕಾರಣದಿಂದ ಕೃಷಿ ಖಾತೆಯನ್ನು ಬಿ.ಸಿ. ಪಾಟೀಲ್ ಗೆ ವಹಿಸಲಾಗಿದೆ. ಇದಕ್ಕೂ ಮೊದಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್ಚುವರಿಯಾಗಿ ಕೃಷಿ ಖಾತೆಯನ್ನು ವಹಿಸಲಾಗಿತ್ತು. ಬೊಮ್ಮಾಯಿ ಅವರಿಗೆ ಕೃಷಿಯ ಬದಲು ಅರಣ್ಯ ಖಾತೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ. ಈಗಾಗಲೇ ಪರಿಷ್ಕೃತ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ.
ಇನ್ನೊಂದೆಡೆ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನದಿಂದ ವಂಚಿತರಾಗಿದ್ದ ಶಾಸಕ ಮಹೇಶ್ ಕುಮಟಳ್ಳಿಗೆ ನೀಡಲಾಗಿದ್ದ ಎಂಎಸ್ ಐಎಲ್ ಅಧ್ಯಕ್ಷ ಸ್ಥಾನವನ್ನು ಅವರು ನಿರಾಕರಿಸಿದ್ದಾರೆ. ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ನಿರ್ದೇಶಕ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿರುವ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ನನಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಮಾಧ್ಯಮಗಳ ಮೂಲಕ ವಿಷಯ ತಿಳಿಯಿತು. ನಿಗಮ ಮಂಡಳಿ ಬಗ್ಗೆ ನನಗೆ ಆಸಕ್ತಿ ಇಲ್ಲ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ – ಜಲ ಸಂಪನ್ಮೂಲ, ಡಾ. ಕೆ. ಸುಧಾಕರ್ – ವೈದ್ಯಕೀಯ ಶಿಕ್ಷಣ, ಆನಂದ್ ಸಿಂಗ್ – ಆಹಾರ ಮತ್ತು ನಾಗರಿಕ, ಶ್ರೀಮಂತ ಪಾಟೀಲ್- ಜವಳಿ ಇಲಾಖೆ, ನಾರಾಯಣ ಗೌಡ- ಪೌರಾಡಳಿತ ಮತ್ತು ತೋಟಗಾರಿಕೆ, ಎಸ್.ಟಿ. ಸೋಮಶೇಖರ್- ಸಹಕಾರ, ಶಿವರಾಂ ಹೆಬ್ಬಾರ್ – ಕಾರ್ಮಿಕ, ಭೈರತಿ ಬಸವರಾಜು – ನಗರಾಭಿವೃದ್ಧಿ, ಗೋಪಾಲಯ್ಯ – ಸಣ್ಣ ಕೈಗಾರಿಕೆ ಹಾಗೂ ಬಿ.ಸಿ. ಪಾಟೀಲ್ಗೆ ಅರಣ್ಯ ಖಾತೆ ನೀಡಲಾಗಿತ್ತು. ಆದರೆ, ಇದೀಗ ಬಿ.ಸಿ. ಪಾಟೀಲ್ ಅವರಿಗೆ ಕೃಷಿ ಇಲಾಖೆ ಜವಾಬ್ದಾರಿಯನ್ನು ವಹಿಸಲಾಗಿದೆ.