ಭಾವಿ ಪತ್ನಿಗೆ ವಜ್ರದುಂಗರ ತೊಡಿಸಿದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರು ವಜ್ರದುಂಗರ ತೊಡಿಸುವ ಮೂಲಕ ರೇವತಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ ನಿಖಿಲ್ ಹಾಗೂ ರೇವತಿ ಅವರ ನಿಶ್ಚಿತಾರ್ಥ ಒಕ್ಕಲಿಗ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆದಿದೆ. ಈ ನಿಶ್ಚಿತಾರ್ಥ ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಅವರ ಸಹೋದರಿಯರಾದ ಶೈಲಜಾ ಮತ್ತು ಅನಸೂಯ ಹಾಗೂ ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ ಅವರ ಮಾರ್ಗದರ್ಶನದಲ್ಲಿ ಎಲ್ಲಾ ತಯಾರಿಗಳು ಆಗಿವೆ. ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಕೋರಿದರು.

ನಿಶ್ಚಿತಾರ್ಥ ಸಂಪೂರ್ಣ ವೈಟ್ ಥೀಮ್‍ನಲ್ಲಿದ್ದು, ಕಾರ್ಪೆಟ್‍ಯಿಂದ ಹಿಡಿದು ನಿಖಿಲ್-ರೇವತಿ ಉಂಗುರ ಬದಲಾಯಿಸುವ ಮಂಟಪ ಕೂಡ ಶ್ವೇತ ವರ್ಣದಲ್ಲಿದೆ. ನಿಶ್ಚಿತಾರ್ಥದ ಮಂಟಪ ಹೂವಿನಿಂದ ಅಲಂಕರಿಸಲಾಗಿದ್ದು, ಅದಕ್ಕಾಗಿ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಬೆಳೆಯುವ ಬಿಳಿ ಬಣ್ಣದ ಹೂವನ್ನು ತರಿಸಲಾಗಿದೆ. ದೆಹಲಿಯಿಂದ ಕ್ರಿಸ್ಟಲ್ಸ್‍ಗಳನ್ನು ತರಿಸಿ ಅಲಂಕಾರಕ್ಕೆ ಬಳಸಿಕೊಳ್ಳಲಾಗಿದೆ. ಸೀಲಿಂಗ್ ಸಹ ಹೂವಿನಿಂದಲೇ ಅಲಂಕಾರ ಮಾಡಲಾಗಿದೆ. ತಾಜ್ ವೆಸ್ಟೆಂಡ್ ಗೇಟಿನಿಂದ ನಿಶ್ಚಿತಾರ್ಥ ನಡೆಯುವ ಜಾಗದ ವರೆಗೂ ಹೂವುಗಳಿಂದ ಅಲಂಕಾರ ಮಾಡಲಾಗಿದೆ.

ಈ ನಿಶ್ಚಿತಾರ್ಥದಲ್ಲಿ ವಿಐಪಿ ಮತ್ತು ಸಾಮಾನ್ಯ ಜನ ಎಲ್ಲರಿಗೂ ಒಂದೇ ರೀತಿಯ ಅಡುಗೆಯನ್ನು ಮಾಡಿಸಲಾಗಿದೆ. ಸುಮಾರು 50 ರೀತಿಯ ಕರ್ನಾಟಕ ಶೈಲಿಯ ಖಾದ್ಯಗಳನ್ನು ಬಂದ ಅತಿಥಿಗಳು ಸವಿಯುತ್ತಿದ್ದಾರೆ. ವಿಶೇಷ ಎಂದರೆ ಕುಮಾರಸ್ವಾಮಿಯವರು ತಮ್ಮ ಪುತ್ರನ ನಿಶ್ಚಿತಾರ್ಥಕ್ಕೆ ಬಂದಂತವರು ಬಾಳೆ ಎಲೆಯಲ್ಲಿ ಊಟ ಮಾಡಬೇಕು ಎಂದು ಆಸೆಪಟ್ಟಿದ್ದರು. ಈ ಕಾರಣಕ್ಕೆ ಬಾಳೆ ಎಲೆಯಲ್ಲಿಯೇ ಊಟ ಬಡಿಸಲಾಗುತ್ತಿದೆ. ಇದರ ಜೊತೆ ಅನುಕೂಲವಾಗಲಿ ಎಂದು ಬಫೆ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ನಿಶ್ಚಿತಾರ್ಥಕ್ಕೆ ಬಂದ ಎಲ್ಲರೂ ಊಟ ಮಾಡಿ ಹೋಗಬೇಕು ಎನ್ನುವ ಉದ್ದೇಶದಿಂದ ಈ ರೀತಿ ವ್ಯವಸ್ಥೆ ಮಾಡಲಾಗಿದೆ. ಇನ್ನು 50 ಖ್ಯಾದ್ಯಗಳನ್ನು ದೇವೇಗೌಡರ ಕುಟುಂಬ ಮತ್ತು ಹುಡುಗಿ ಮನೆಯ ಕುಟುಂಬದವರೆಲ್ಲರೂ ರುಚಿ ನೋಡಿ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಮದುವೆ ಊಟದಲ್ಲಿ ಪರೋಟ, ರೋಟಿ, ವಿವಿಧ ಪಲ್ಯ, ಹೋಳಿಗೆ, ಚಿರೋಟಿ ಸೇರಿದಂತೆ 50 ಖಾದ್ಯಗಳು, ನಾಲ್ಕು-ಐದು ಬಗೆಯ ತಾಜಾ ಜ್ಯೂಸ್ ಸೇರಿದಂತೆ ತಂಪು ಪಾನೀಯಗಳು. ಮೆಸ್ಮಲಯ್, ಜಾಮೂನು ಸೇರಿದಂತೆ ಐದರಿಂದ ಆರು ಸ್ವೀಟ್‍ಗಳನ್ನು ಮಾಡಲಾಗಿದೆ. ಒಟ್ಟು 6 ಸಾವಿರ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ