ನವದೆಹಲಿ: ಆರೋಗ್ಯ ಸಚಿವ ಶ್ರೀರಾಮುಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಇಂದು ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಶ್ರೀರಾಮುಲು ಅಮಿತ್ ಶಾ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಅಮಿತ್ ಶಾ ಭೇಟಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಶ್ರೀರಾಮುಲು, “ಮಗಳ ಮದುವೆ ಹಿನ್ನೆಲೆ ಆಹ್ವಾನ ನೀಡಲು ಭೇಟಿ ಮಾಡಿದ್ದೇನೆ. ಡಿಸಿಎಂ ಸ್ಥಾನಕ್ಕಾಗಿ ಅಮಿತ್ ಶಾ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ,” ಎಂಬುದಾಗಿ ಹೇಳಿದ್ದಾರೆ. ಜೊತೆಗೆ “ಡಿಸಿಎಂ ಸ್ಥಾನದ ವಿಚಾರವಾಗಿ ಯಾವುದೇ ಚರ್ಚೆ ಕೂಡ ಮಾಡಿಲ್ಲ. ರಾಜ್ಯ ರಾಜಕಾರಣ, ಸರ್ಕಾರ ಹಾಗೂ ಇಲಾಖೆ ಬಗ್ಗೆ ಮಾತನಾಡಿದ್ದೇನೆ. ನನ್ನ ವೈಯಕ್ತಿಕ ವಿಚಾರಗಳನ್ನು ಶಾ ಜೊತೆ ಹಂಚಿಕೊಂಡಿದ್ಧೇನೆ,” ಎಂದು ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಡಿಸಿಎಂ ಸ್ಥಾನದಿಂದ ಹಿಂದೆ ಉಳಿದ ವಿಚಾರವಾಗಿ, ಈ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಅವಕಾಶಗಳ ಬಗ್ಗೆ ಚರ್ಚೆ ಮಾಡಲ್ಲ ಎಂದರು.
ರಾಜ್ಯದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾಗಿದ್ದು, ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು. “ಕೊರೊನಾ ವೈರಸ್ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ರಾಜ್ಯದಲ್ಲಿ ಅನುಮಾನ್ಪದ 80-85 ರಕ್ತ ಪರಿಶೀಲನೆ ಮಾಡಲಾಗಿದೆ. ಎಲ್ಲ ವರದಿಗಳಲ್ಲೂ ನೆಗೆಟಿವ್ ರಿಪೋರ್ಟ್ ಬಂದಿದೆ. ವಿಮಾನ ನಿಲ್ದಾಣ, ಬಂದರು ಪ್ರದೇಶ, ಕೇರಳ ಗಡಿಭಾಗದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಪ್ರತಿ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ಗಳನ್ನು ಕೊರೊನಾ ಸೋಂಕು ಪೀಡಿತರಿಗಾಗಿ ಮೀಸಲಿರಿಸಲಾಗಿದೆ. ಜನರು ಆತಂಕ ಪಡುವುದು ಬೇಕಿಲ್ಲ, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಎಸ್ಟಿ-ಎಸ್ಸಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂಕೋರ್ಟ್ ಆದೇಶ ವಿಚಾರವಾಗಿ, ನಾನು ಇನ್ನು ತೀರ್ಪು ಓದಿಲ್ಲ. ಮಾಹಿತಿ ಪಡೆದುಕೊಂಡಿದ್ದೇನೆ. ತೀರ್ಪಿನ ಬಗ್ಗೆ ಸಿಎಂ ಜತೆಗೆ ಚರ್ಚೆ ಮಾಡುತ್ತೇನೆ ಎಂದರು.