ಬೀಜಿಂಗ್ : ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ಗೆ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 722ಕ್ಕೆ ಏರಿಕೆ ಆಗಿದೆ. ಎರಡು ದಶಕಗಳ ಹಿಂದೆ ಕಾಣಿಸಿಕೊಂಡಿದ್ದ ಸಾರ್ಸ್ಗಿಂತಲೂ ಈ ವೈರಸ್ ಭೀಕರವಾಗಿದೆ.
ಇದುವರೆಗೆ ಚೀನಾದಲ್ಲಿ ಒಟ್ಟು 34,500 ಜನರಲ್ಲಿ ಕೊರೊನಾ ಸೋಂಕು ತಾಗಿದೆ. ದಿನೇ ದಿನೇ ಸಾವಿನ ಸಂಖ್ಯೆ ಏರಿಕೆ ಆಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಚೀನಾ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ.
2002-2003ರಲ್ಲಿ ಸಾರ್ಸ್ ಹೆಸರಿನ ವೈರಸ್ 650 ಜನರನ್ನು ಬಲಿ ತೆಗೆದುಕೊಂಡಿತ್ತು. ಅದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಕೊರೊನಾ ವೈರಸ್ ದಾಳಿಗೆ ಚೀನಾದ ಜನರು ತತ್ತರಿಸಿದ್ದಾರೆ. ಚೀನಾದಿಂದ 20 ಇತರೆ ದೇಶಗಳಿಗೂ ಈ ಮಾರಣಾಂತಿಕ ವೈರಸ್ ಹರಡಿದೆ. ಈ ಹಿನ್ನೆಲೆಯಲ್ಲಿ ಭಾರತದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಿಂದ ಬರುವ ಪ್ರಯಾಣಿಕರು ಮತ್ತು ಚೀನಾಗೆ ತೆರಳುವ ಪ್ರಯಾಣಿಕರ ಮೇಲೂ ನಿರ್ಬಂಧ ವಿಧಿಸಲಾಗಿದೆ.
ಬುಧವಾರ ಜಪಾನಿನ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ 10 ಮಂದಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಈಗ ಆ ಸಂಖ್ಯೆ ಏರಿಕೆಯಾಗಿದ್ದು, ಒಟ್ಟು 64 ಮಂದಿಯಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಯಾಕೋಹಾಮಾ ಬಂದರಿನಲ್ಲಿ ಹಡಗನ್ನು ನಿಲ್ಲಿಸಲಾಗಿದೆ. ಈ ಹಡಗಿನಲ್ಲಿ 3700 ಪ್ರಯಾಣಿಕರಿದ್ದರು.
ಜಪಾನ್ನಲ್ಲಿ 2 ವಾರಗಳ ಬಳಿಕ 10 ಮಂದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತು. ಕೊರೊನಾ ಗುಣಲಕ್ಷಣಗಳು ಕಂಡುಬಂದ ಹಿನ್ನೆಲೆ, ಅವರನ್ನು ಪರೀಕ್ಷೆಗೊಳಪಡಿಸಿದಾಗ ಅದು ಖಚಿತವಾಗಿತ್ತು. ಈ 41 ಜನರಿಂದ ಬೇರೆ ಪ್ರಯಣಿಕರಿಗೂ ಕೊರೊನಾ ವೈರಸ್ ಹರಡುವ ಭೀತಿ ಎದುರಾಗಿದೆ.