ವುಹಾನ್/ಬೀಜಿಂಗ್, ಫೆ.7- ಚೀನಾದಲ್ಲಿ ಕೊರೋನಾ ವೈರಸ್ ಮತ್ತಷ್ಟು ಜನರನ್ನು ಬಲಿ ಪಡೆದುಕೊಂಡಿದ್ದು, ಸಾವಿಗೀಡಾದವರ ಸಂಖ್ಯೆ 700ಕ್ಕೆ ಏರಿಕೆಯಾಗಿದೆ.
ಅಲ್ಲದೆ, 31,000ಕ್ಕೂ ಹೆಚ್ಚು ಮಂದಿಗೆ ಈ ಮಾರಿ ವ್ಯಾಪಿಸಿದ್ದು, ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ.
ಕೊರೋನಾ ಹೆಮ್ಮಾರಿ ಕೆಲ ವರ್ಷಗಳ ಹಿಂದೆ ಚೀನಾವನ್ನು ತೀವ್ರ ಆತಂಕಕ್ಕೀಡು ಮಾಡಿದ್ದ ಸಾರ್ಸ್ ಸೋಂಕಿಗಿಂತಲೂ ಅತ್ಯಂತ ಅಪಾಯಕಾರಿಯಾಗಿ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ.
ಚೀನಾ ಡೆಡ್ಲಿ ವೈರಾಣುವಿನಿಂದಾಗಿ ವಿವಿಧ ದೇಶಗಳೊಂದಿಗೆ ಹಂತ ಹಂತವಾಗಿ ಸಂಪರ್ಕ ಕಡಿದುಕೊಂಡು ಪರಿತ್ಯಕ್ತವಾಗುತ್ತಿರುವುದು ಮತ್ತೊಂದು ಆತಂಕಕಾರಿ ಬೆಳವಣಿಗೆಯಾಗಿದೆ.
ಒಟ್ಟಾರೆ ಚೀನಾದಲ್ಲಿ ಪರಿಸ್ಥಿತಿ ಅಯೋಮಯವಾಗಿದ್ದು, ವೈರಸ್ ಪಿಡುಗಿನಿಂದಾಗಿ ಆಹಾರ ಮತ್ತು ಅಗತ್ಯ ವಸ್ತುಗಳ ಪೂರೈಕೆ ಕ್ರಮೇಣ ಕಡಿಮೆಯಾಗುತ್ತಿದ್ದು , ಮತ್ತೊಂದು ಗಂಭೀರ ಸಮಸ್ಯೆ ಎದುರಾಗಿದೆ. ಕೊರೋನಾ ಈಗಾಗಲೇ 30ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. ವೈರಸ್ ಹರಡದಂತೆ ತಡೆಯಲು ಚೀನಾ ಸಾಕಷ್ಟು ಹೆಣಗಾಡುತ್ತಿದೆ.
ಟ್ರಂಪ್ ಜತೆ ಕೊರೋನಾ ಕುರಿತು ಜಿನ್ಪಿಂಗ್ ಚರ್ಚೆ: ಈ ನಡುವೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಇಂದು ಬೆಳಗ್ಗೆ ಅಮೆರಿಕ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮಾರಕ ಕೊರೋನಾ ವೈರಸ್ ಕುರಿತು ಚರ್ಚಿಸಿದರು.
ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಚೀನಾ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಶೀಘ್ರವೇ ಈ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಚೀನಿ ಅಧ್ಯಕ್ಷರು ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಚೀನಾಗೆ ಅಗತ್ಯವಾದ ಎಲ್ಲ ಸಹಕಾರವನ್ನು ಅಮೆರಿಕ ನೀಡುವುದಾಗಿ ಭರವಸೆ ನೀಡಿದರು.