ಬಿಜೀಂಗ್: ಕೊರೊನಾ ವೈರಸ್ ಮಹಾಮಾರಿ ಬಗ್ಗೆ ಮೊದಲ ಬಾರಿ ಎಚ್ಚರಿಕೆ ನೀಡಿದ ಚೀನಿ ವೈದ್ಯ, ಚಿಕಿತ್ಸೆ ಫಲಿಸದೇ ತಾವು ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆಯಲ್ಲಿಯೇ ಇಂದು ಸಾವನ್ನಪ್ಪಿದ್ದಾರೆ.
ಲಿ ವೆನ್ಲಿಂಗ್ ಸಾವನ್ನಪ್ಪಿದ್ದ ವೈದ್ಯ. ವುಹಾನ್ನಲ್ಲಿ ಕಣ್ಣಿನ ವೈದ್ಯರಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದರು. ಇವರ ಆಸ್ಪತ್ರೆಗೆ ಬಂದ ಕೆಲವು ರೋಗಿಗಳಲ್ಲಿ 2002-03ರಲ್ಲಿ ಕಂಡು ಬಂದಿದ್ದ ಸಾರ್ಸ್ ರೋಗದ ರೀತಿಯ ಲಕ್ಷಣಗಳು ಇದ್ದವು ಎಂಬ ಬಗ್ಗೆ ಮೊದಲ ಬಾರಿ ಈತ ಪತ್ತೆ ಹಚ್ಚಿದ.
ಅಲ್ಲದೇ ಡಿ.30ರಂದು 34 ವರ್ಷದ ಈ ವೈದ್ಯ ಈ ಕುರಿತು ತನ್ನ ಸಹೋದ್ಯೋಗಿಗಳಿಗೂ ಕೂಡ ಸಂದೇಶ ರವಾನಿಸಿದ್ದ. ಸಾರ್ಸ್ ರೋಗದ ರೀತಿಯ ಸೋಂಕು ಪತ್ತೆಯಾಗಿದ್ದು, ಜನರು ಎಚ್ಚರಿಕೆವಹಿಸಿ, ಮಾಸ್ಕ್ ಧರಿಸಿ ಓಡಾಡುವಂತೆ ಸೂಚಿಸಿದ್ದ ಆದರೆ, ಈತ ಜನರಲ್ಲಿ ಸುಳ್ಳು ಭೀತಿ ಹಬ್ಬಿಸುತ್ತಿದ್ದಾನೆ ಎಂದು ವೈದ್ಯ ಸೇರಿದಂತೆ 8 ಜನರ ವಿರುದ್ದ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು.
ಇದಾದ ಬಳಿಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಈತ ಕೂಡ ಸೋಂಕಿಗೆ ತುತ್ತಾದ. ಹುಬೈ ಪ್ರಾಂತ್ಯದ ವುಹಾನ್ ಸೆಂಟ್ರಲ್ ಆಸ್ಪತ್ರೆಯಲ್ಲಿ ವೈದ್ಯ ಲಿ ಸಾವನ್ನಪ್ಪಿದ್ದು, ಚೀನಾದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.
ಇನ್ನು ಈ ಕುರಿತು ಸಂದೇಶ ನೀಡಿರುವ ಆಸ್ಪತ್ರೆ ಅಧಿಕಾರಿಗಳು, ನಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕಣ್ಣಿನ ವೈದ್ಯ ಲಿ, ಡೆಡ್ಲಿ ವೈರಸ್ ಕೊರೊನಾ ವೈರಸ್ಗೆ ತುತ್ತಾಗಿದ್ದು ಅವರು ಚಿಕಿತ್ಸೆ ಫಲಿಸದೆ ಫೆ.7ರ ಮಧ್ಯ ರಾತ್ರಿ 2.58ಕ್ಕೆ ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
ಚೀನಾದಲ್ಲಿ ಇದುವರೆಗೂ 28 ಸಾವಿರ ಜನರು ಈ ಸೋಂಕಿಗೆ ತುತ್ತಾಗಿದ್ದು 560 ಮಂದಿ ಸಾವನ್ನಪ್ಪಿದ್ದಾರೆ. ಈ ಸೋಂಕಿಗೆ ಔಷಧಿ ಕಂಡು ಹಿಡಿಯುವಲ್ಲಿ ವಿಫಲವಾಗಿದ್ದು, ದಿನದಿಂದ ದಿನಕ್ಕೆ ಈ ಸೋಂಕಿಗೆ ತುತ್ತಾಗುವರ ಸಂಖ್ಯೆ ಹೆಚ್ಚಾಗಿದೆ.