ಭೋಪಾಲ್(ಮಧ್ಯಪ್ರದೇಶ): ಯುವಕನೊಬ್ಬ ರಾಜಾ ಭೋಜ್ ವಿಮಾನ ನಿಲ್ದಾಣದೊಳಕ್ಕೆ ಅಕ್ರಮವಾಗಿ ನುಸುಳಿ ಪಾರ್ಕಿಂಗ್ ಮಾಡಿದ್ದ ಸ್ಪೈಸ್ ಜೆಟ್ ವಿಮಾನದ ಮುಂಭಾಗದಲ್ಲಿ ಕುಳಿತು ಕಲ್ಲಿನಿಂದ ಗುದ್ದಿ ಜಖಂಗೊಳಿಸಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ವಿಮಾನ ನಿಲ್ದಾಣದೊಳಕ್ಕೆ ನುಗ್ಗಿದ್ದ ಯುವಕ ಸ್ಪೈಸ್ ಜೆಟ್ ವಿಮಾನದ ಮುಂಭಾಗ ಕುಳಿತು, ನಂತರ ಕಲ್ಲಿನಿಂದ ಜಜ್ಜಿದ್ದ. ವಿಮಾನದೊಳಗೆ 48 ಪ್ರಯಾಣಿಕರು ಇದ್ದಿದ್ದರು. ಈ ಘಟನೆಯಿಂದಾಗಿ ವಿಮಾನ ಸಂಚಾರದಲ್ಲಿ ಒಂದು ಗಂಟೆ ವಿಳಂಬವಾಗಿರುವುದಾಗಿ ವರದಿ ತಿಳಿಸಿದೆ.
ಯುವಕನನ್ನು ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ ಎಫ್) ಬಂಧಿಸಿ, ನಂತರ ಪೊಲೀಸರ ವಶಕ್ಕೊಪ್ಪಿಸಿರುವುದಾಗಿ ವರದಿ ತಿಳಿಸಿದೆ. ಈತ ಭದ್ರತೆಯವರ ಕಣ್ಣು ತಪ್ಪಿಸಿ ಹೇಗೆ ಒಳ ನುಸುಳಿ ಬಂದಿದ್ದಾನೆ, ಈತನ ಉದ್ದೇಶ ಏನು ಎಂಬ ಬಗ್ಗೆ ತನಿಖೆಯಿಂದ ತಿಳಿದು ಬರಬೇಕಾಗಿದೆ ಎಂದು ವರದಿ ತಿಳಿಸಿದೆ.