ಸಂಪುಟಕ್ಕೆ ಸಿ.ಪಿ. ಯೋಗೇಶ್ವರ್​ ಸೇರ್ಪಡೆಗೆ ಸ್ವಪಕ್ಷೀಯರಿಂದಲೇ ವಿರೋಧ; ರಾಜೀನಾಮೆ ಬೆದರಿಕೆ ಒಡ್ಡಿರುವ ಶಾಸಕರು

ಬೆಂಗಳೂರು; ರಾಜ್ಯ ಸಂಪುಟಕ್ಕೆ ಸಿ.ಪಿ. ಯೋಗೇಶ್ವರ್ ಸೇರ್ಪಡೆಯನ್ನು ಸ್ವತಃ ಬಿಜೆಪಿ ಶಾಸಕರೇ ವಿರೋಧಿಸಿದ್ದು, ಅಕಸ್ಮಾತ್ ಯೋಗೇಶ್ವರ್ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಯಾದರೆ ತಾವು ರಾಜೀನಾಮೆ ನೀಡುವುದಾಗಿ ಹಲವರು ಬೆದರಿಕೆ ಒಡ್ಡಿದ್ದಾರೆ ಎಂದು ತಿಳಿದುಬಂದಿದೆ.
ಸಿ.ಪಿ. ಯೋಗೇಶ್ವರ್ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೀಗಾಗಿ ಯೋಗೇಶ್ವರ್ ಅವರಿಗೂ ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನಸ್ಸು ಮಾಡಿದ್ದಾರೆ, ಅಲ್ಲದೆ, ಅವರು ಬಿಜೆಪಿ ಹೈಕಮಾಂಡ್ ನಾಯಕರಿಗೆ ನೀಡಿರುವ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಯೋಗೇಶ್ವರ್ ಹೆಸರೂ ಇದೆ ಎನ್ನಲಾಗುತ್ತಿದೆ.
ಆದರೆ, ಯಡಿಯೂರಪ್ಪ ಅವರ ಈ ನಡೆಗೆ ಮೂಲ ಬಿಜೆಪಿಗರೇ ಕೆಂಡಾಮಂಡಲವಾಗಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ಬಹಿರಂಗವಾಗಿಯೇ ಸಿಎಂ ಗೆ ಬೆದರಿಕೆ ಹಾಕಿರುವ ಹಲವಾರು ಶಾಸಕರು, “ಚುನಾವಣೆಯಲ್ಲಿ ಸೋತವರನ್ನು ಸಚಿವರನ್ನಾಗಿ ಮಾಡುವುದಾದರೆ ನಾವು ಏಕೆ ಬೇಕು? ಸಿ.ಪಿ. ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡಿದ್ರೆ ನಾವು ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ” ಎಂದು ಬೆದರಿಕೆ ಒಡ್ಡಿದ್ದಾರೆ ಎನ್ನುತ್ತಿವೆ ಬಿಜೆಪಿ ಮೂಲಗಳು.
ಒಟ್ಟಾರೆ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಎಂಬುದು ದಿನೇ ದಿನೇ ಕಗ್ಗಂಟಾಗುತ್ತಲೇ ಇದೆ. ಸಚಿವ ಸ್ಥಾನಕ್ಕಾಗಿ ಮೂಲ ಹಾಗೂ ವಲಸಿಗ ಬಿಜೆಪಿ ನಾಯಕರು ಲಾಬಿ ನಡೆಸುತ್ತಿರುವ ಬೆನ್ನಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿರುವ ಸಿ.ಪಿ. ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡಲು ಮುಂದಾಗಿರುವುದು ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಕಿತ್ತಾಟಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ