ನವದೆಹಲಿ; ಅಲ್ಪಸಂಖ್ಯಾತ, ಹಿಂದುಳಿದ, ದಲಿತ, ಮಹಿಳೆಯರ ಹಾಗೂ ಯುವ ಜನರ ಅಭಿವೃದ್ಧಿಯೇ ಕೇಂದ್ರ ಬಜೆಟ್ 2020 ಮೂಲ ಆಶಯ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಈ ಬಜೆಟ್ನಲ್ಲಿ ಹತ್ತಾರು ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಂಸತ್ನಲ್ಲಿ ಬಜೆಟ್ ಮಂಡಿಸಿದ ನಂತರ ಬಜೆಟ್ ಮೇಲಿನ ಭಾಷಣದ ವೇಳೆ ಮಾತನಾಡಿರುವ ಸಚಿವೆ ನಿರ್ಮಲಾ ಸೀತಾರಾಮನ್, “ದೇಶದ ಆರ್ಥಿಕ ಅಭಿವೃದ್ಧಿಯ ಜೊತೆಗೆ ಕಾಳಜಿಯ ಸಮಾಜ ನಿರ್ಮಾಣ ಮಾಡುವುದು ಕೇಂದ್ರ ಸರ್ಕಾರದ ಗುರಿ. ಇದಕ್ಕೆ ಪೂರಕವಾಗುವಂತೆ ಸಮಾಜದಲ್ಲಿ ಹಿಂದುಳಿದಿರುವ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸಮಾಜದ ಜೊತೆಗೆ ಮಹಿಳೆಯರು ಹಾಗೂ ಯುವಕರ ಅಭಿವೃದ್ಧಿಗೂ ಸರ್ಕಾರ ಒತ್ತು ನೀಡಲಿದ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಹಿಂದ ವರ್ಗದ ಜನರಿಗೆ ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಲಾಗುವುದು. ಉಳಿತಾಯ ಹೆಚ್ಚುವಂತೆ ನೋಡಿಕೊಳ್ಳಲಾಗುವುದು. ಪ್ರಧಾನ ಮಂತ್ರಿ ಆವಾಜ್ ಯೋಜನೆಯ ಮೂಲಕ ನಿವಾಸ ರಹಿತರಿಗೆ ಹೊಸ ನಿವಾಸಗಳನ್ನು ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಜನ ಇದರ ಉಪಯೋಗ ಪಡೆಯಲಿದ್ದಾರೆ.
ಈಗಾಗಲೇ ಜಿಎಸ್ಟಿಯಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಲಾಭ ಪಡೆದು ಅಭಿವೃದ್ಧಿಯತ್ತ ಸಾಗಿಸುತ್ತಿದೆ. ಈ ಮೂಲಕ ಮಹಿಳೆಯರು ಹಾಗೂ ಯುವಕರು ಹೆಚ್ಚು ಸಂಖ್ಯೆಯಲ್ಲಿ ಲಾಭ ಮತ್ತು ಉದ್ಯೋಗ ಗಳಿಸುತ್ತಿದ್ದಾರೆ. ಅಲ್ಲದೆ, ಇದರ ಜೊತೆಗೆ ಯುವಕರಿಗಾಗಿ ಹೊಸ ಉದ್ಯೋಗಗಳ ಸೃಷ್ಟಿಗೂ ಆದ್ಯತೆ ನೀಡಲಾಗುವುದು. ಯುವಕರ ಅಭಿವೃದ್ಧಿ ದೇಶಕ್ಕೆ ಅತೀ ಅಗತ್ಯವಾಗಿದ್ದು, ಕೇಂದ್ರ ಸರ್ಕಾರ ಇದಕ್ಕೆ ಹೆಚ್ಚು ಒತ್ತು ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.