ಹೊಸ ವರ್ಷವನ್ನು ಬರಮಾಡಿಕೊಳ್ಳಲು ಇಡೀ ವಿಶ್ವವೇ ಸಿದ್ಧವಾಗಿದೆ. ಇಂದು ರಾತ್ರಿ ಹಲವು ಕಡೆಗಳಲ್ಲಿ ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಭ್ರಮಕ್ಕೆ ಗೂಗಲ್ ಡೂಡಲ್ ಮೆರಗು ನೀಡಿದೆ.
ಕಪ್ಪೆ ಹಾಗೂ ಪಕ್ಷಿಯೊಂದು ಕ್ಯಾಪ್ ಧರಿಸಿ ಕೂತಿವೆ. ಎದುರು ಸಿಡಿಯುತ್ತಿರುವ ಪಟಾಕಿಯನ್ನು ಇವು ಕಣ್ತುಂಬಿಕೊಳ್ಳುತ್ತಿವೆ. ಹೀಗೆ ಭಿನ್ನವಾಗಿ ಇವು ಹೊಸ ವರ್ಷವನ್ನು ಸ್ವಾಗತಿಸಿವೆ. ವಿಶೇಷ ದಿನಗಳಲ್ಲಿ ಗೂಗಲ್ ವಿವಿಧ ರೀತಿಯ ಡೂಡಲ್ಗಳನ್ನು ರಚಿಸುತ್ತದೆ. ಅಂತೆಯೇ ಹೊಸ ವರ್ಷದ ಸಂಭ್ರಮದ ಮೆರಗು ಹೆಚ್ಚಿಸಲು ಪರಿಚಯಿಸಿರುವ ಗೂಗಲ್ ಡೂಡಲ್ ಕೂಡ ವಿಶೇಷವಾಗಿದೆ.
ಇನ್ನು, ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿಯೂ ಸಜ್ಜಾಗಿದೆ. ಜನರು ಕೂಡ ಪಾರ್ಟಿ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ನಗರದ ಎಲ್ಲೆಡೆ ಸಂಭ್ರಮಾಚರಣೆ ನಡೆಯಲಿದ್ದು, ಯಾವುದೇ ರೀತಿಯ ಅಹಿತರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ. ಹೀಗಾಗಿಯೇ ಪ್ರತಿವರ್ಷದಂತೆಯೇ ಈ ವರ್ಷವೂ ನಗರದ ಎಲ್ಲಾ ರಸ್ತೆ ಮೇಲ್ಸೇತುವೆ ಬಂದ್ ಮಾಡುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.