ಬೆಂಗಳೂರು: ಈಗ ಖಾಲಿ ಉಳಿದಿರುವ ಒಂದು ಎಂಎಲ್ಸಿ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ಶುರುವಾಗಿದೆ. ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ತ್ಯಾಗ ಮಾಡಿದ್ದ ಆರ್. ಶಂಕರ್ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಂತೂ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ ಅವರ ಮೇಲೆ ವಿಪರೀತ ಒತ್ತಡವಿದೆ. ಆರು ತಿಂಗಳೊಳಗೆ ಅವರು ಶಾಸಕರಾಗಬೇಕಿದೆ. ಸದ್ಯಕ್ಕೆ ಒಂದೇ ಎಂಎಲ್ಸಿ ಸ್ಥಾನ ಖಾಲಿ ಉಳಿದಿದೆ. ಯಡಿಯೂರಪ್ಪ ಈ ಸ್ಥಾನವನ್ನು ಸವದಿಗೆ ಕೊಡುವ ಇರಾದೆಯಲ್ಲಿದ್ದಾರೆ. ಆದರೆ, ರಾಣೆಬೆನ್ನೂರಿನ ಮಾಜಿ ಪಕ್ಷೇತರ ಶಾಸಕ ಆರ್. ಶಂಕರ್ ಅವರು ತಮಗೆ ಈ ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಶಂಕರ್ ಅವರು ಈ ರೀತಿ ಹಠ ಮಾಡುವುದಕ್ಕೂ ಕಾರಣವಿದೆ. ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ಬಿಟ್ಟುಕೊಟ್ಟರೆ ಚುನಾವಣೆ ಮುಗಿದ ಕೂಡಲೇ ಎಂಎಲ್ಸಿ ಮಾಡಿ ಮಂತ್ರಿಗಿರಿ ಕೊಡುತ್ತೇನೆ ಎಂದು ಯಡಿಯೂರಪ್ಪ ಮಾತುಕೊಟ್ಟಿದ್ದರು. ಈಗ ಆ ಮಾತು ಉಳಿಸಿಕೊಳ್ಳಿ ಎಂದು ಶಂಕರ್ ಒತ್ತಾಯಿಸುತ್ತಿದ್ದಾರೆ.
ಜೂನ್ ತಿಂಗಳಲ್ಲಿ ಏಳು ಎಂಎಲ್ಸಿ ಸ್ಥಾನಗಳು ಖಾಲಿ ಬೀಳುತ್ತವಾದರೂ ಸದ್ಯಕ್ಕೆ ಒಂದು ಮಾತ್ರ ಖಾಲಿ ಇದೆ. ಕಾಂಗ್ರೆಸ್ನಿಂದ ಎಂಎಲ್ಸಿಯಾಗಿದ್ದ ರಿಜ್ವಾನ್ ಅರ್ಷದ್ ಅವರು ಶಿವಾಜಿನಗರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ಸದ್ಯಕ್ಕೆ ಒಂದು ಎಂಎಲ್ಸಿ ಸ್ಥಾನ ಮಾತ್ರ ಖಾಲಿ ಉಳಿದಿದೆ.
ಈಗಾಗಲೇ ಡಿಸಿಎಂ ಆಗಿರುವ ಲಕ್ಷ್ಮಣ ಸವದಿಯನ್ನು ತತ್ಕ್ಷಣವೇ ಎಂಎಲ್ಸಿ ಮಾಡಿ, ಜೂನ್ ತಿಂಗಳಲ್ಲಿ ಆರ್. ಶಂಕರ್ ಅವರಿಗೆ ಒಂದು ಎಂಎಲ್ಸಿ ಟಿಕೆಟ್ ಕೊಡುವುದು ಯಡಿಯೂರಪ್ಪ ಅವರ ಯೋಜನೆ. ಆದರೆ, ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್. ಶಂಕರ್ ಅವರು ಈಗಲೇ ಎಂಎಲ್ಸಿ ಮಾಡಿ ಎಂದು ಪಟ್ಟು ಹಿಡಿದಿದ್ಧಾರೆ. ಆರ್. ಶಂಕರ್ ಅವರು ಡಾಲರ್ಸ್ ಕಾಲೊನಿಯಲ್ಲಿರುವ ಯಡಿಯೂರಪ್ಪ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿ ಮಾತುಕತೆ ಕೂಡ ನಡೆಸಿದ್ದಾರೆ.
ಇನ್ನು, ಸಚಿವ ಸ್ಥಾನಕ್ಕೂ ಇನ್ನಿಲ್ಲದ ಪೈಪೋಟಿ ಶುರುವಾಗಿವೆ. ಆರ್. ಶಂಕರ್ ಜೊತೆ ಉಮೇಶ್ ಕತ್ತಿ, ಎಂಟಿಬಿ ನಾಗರಾಜ್ ಮೊದಲಾದವರು ಸಂಪುಟ ಸೇರಲು ಹಾತೊರೆಯುತ್ತಿದ್ದಾರೆ. ಉಮೇಶ್ ಕತ್ತಿ ಅವರು ಯಡಿಯೂರಪ್ಪರನ್ನು ನಿತ್ಯವೂ ಎಡೆತಾಕುತ್ತಿದ್ಧಾರೆ. ಒಂದು ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಉಮೇಶ್ ಕತ್ತಿ ಈಗ ಸಚಿವ ಸ್ಥಾನವಾದರೂ ದಕ್ಕಲಿ ಎಂದು ಓಡಾಡುತ್ತಿದ್ದಾರೆ.
ಹೊಸಕೋಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ವಿರುದ್ಧ ಸೋತಿದ್ದ ಎಂಟಿಬಿ ನಾಗರಾಜ್ ಅವರೂ ಸಚಿವ ಸ್ಥಾನಕ್ಕೆ ಅಪೇಕ್ಷೆ ಪಟ್ಟಿದ್ಧಾರೆ. ಚುನಾವಣೆಯಲ್ಲಿ ಸೋತರೂ ಏನಾದರೂ ವ್ಯವಸ್ಥೆ ಮಾಡುವುದಾಗಿ ಯಡಿಯೂರಪ್ಪ ಭರವಸೆ ಕೊಟ್ಟಿದ್ದ ಹಿನ್ನೆಲೆಯಲ್ಲಿ ಅವರು ಈಗಲೂ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲೇ ಇದ್ದಾರೆ. ಜೂನ್ ತಿಂಗಳಲ್ಲಿ ಖಾಲಿ ಉಳಿಯಲಿರುವ ಏಳು ಪರಿಷತ್ ಸ್ಥಾನಗಳಲ್ಲಿ ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಈಗ ಖಾಲಿ ಇರುವ ಒಂದು ಸ್ಥಾನವನ್ನು ಸವದಿಗೆ ನೀಡುವ ನಿರೀಕ್ಷೆ ಇದೆ. ಆದರೆ, ವಲಸಿಗರು ಪಟ್ಟು ಹಿಡಿದು ಕೂರುವ ಸಾಧ್ಯತೆ ಇಲ್ಲದಿಲ್ಲ.