ನವದೆಹಲಿ, ಡಿ.29-ಮಾರಕ ವಾಯು ಮಾಲಿನ್ಯದಿಂದ ಚೇತರಿಸಿಕೊಳ್ಳುತ್ತಿರುವ ರಾಜಧಾನಿ ದೆಹಲಿಯಲ್ಲೀಗ ಮೈ ಕೊರೆಯುವ ಚಳಿ ಚಳಿ. ತಾಪಮಾನ ತೀವ್ರ ಇಳಿಮುಖ ಸ್ಥಿತಿಯಲ್ಲಿಯೇ ಮುಂದುವರಿದಿದ್ದು, ಭಾರತೀಯ ಹವಾಮಾನ ಇಲಾಖೆ(ಐಎಂಡಿ) ದೆಹಲಿಯಲ್ಲಿ ರೆಡ್ ಅಲರ್ಟ್ ಎಚ್ಚರಿಕೆ ಜಾರಿಗೊಳಿಸಿದೆ.
ದೆಹಲಿಯ ಸಫ್ತರ್ಜಂಗ್ ಪ್ರದೇಶದಲ್ಲಿ ಇಂದು ಮುಂಜಾನೆ 6.10ರಲ್ಲಿ 3.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.
ದೆಹಲಿಯಾದ್ಯಂತ ದಟ್ಟ ಮಂಜಿನ ತೆರೆ ಆವರಿಸಿದ್ದು, ಸಫ್ದರ್ಜಂಗ್, ಪಲಂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಾಹನ ಸವಾರರಿಗೆ ಮಬ್ಬು ದೃಷ್ಟಿ ಸಮಸ್ಯೆ ಎದುರಾಯಿತು. ಬೆಳಗ್ಗೆ 5.30ರಿಂದ ಬಿಸಿಲೇರುವ ತನಕ ಇದೇ ಪರಿಸ್ಥಿತಿ ಮುಂದುವರಿದಿತ್ತು.
ನಿನ್ನೆ ದೆಹಲಿಯ ಕೆಲವೆಡೆ ಸರಾಸರಿ ತಾಪಮಾನ 2 ಡಿಗ್ರಿ ಸೆಲ್ಸಿಯಸ್ಗಿಂತ ಕೆಳಮಟ್ಟಕ್ಕೆ ಇಳಿದು, ಉಷ್ಟಾಂಶ ಕುಸಿತದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿತ್ತು. ಅತ್ಯಂತ ಶೀತ ಮತ್ತು ಭಾರೀ ಚಳಿಯಿಂದ ದೆಹಲಿ ಜನರೆ ನಡುಗುವಂತಾಗಿದ್ದು, ವಾರಾಂತ್ಯದ ಕಾರ್ಯಕ್ರಮಗಳಲ್ಲಿ ಏರುಪೇರಾಗಿದೆ. ಥಂಡಿ ವಾತಾವರಣದಿಂದ ಜನರು ಬೆಚ್ಚನೆಯ ಉಡುಪುಗಳನ್ನು ಧರಿಸಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.
ಇನ್ನೂ ಎರಡು ದಿನಗಳ ಕಾಲ ದೆಹಲಿಯಲ್ಲಿ ತೀವ್ರ ಪ್ರತಿಕೂಲ ವಾತಾವರಣ ಮುಂದುವರಿಯಲಿದೆ ಎಂದು ಐಎಂಡಿ ರೆಡ್ ಅಲರ್ಟ್ ಜಾರಿಗೊಳಿಸಿದೆ.
ದೆಹಲಿ ಸುತ್ತಮುತ್ತಲ ಪ್ರದೇಶ, ಗ್ರೇಟರ್ ನೊಯಿಡಾ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ. ಈಶಾನ್ಯ ಪ್ರಾಂತ್ಯ ಮತ್ತು ಜಮ್ಮು-ಕಾಶ್ಮೀರದಲ್ಲೂ ತೀವ್ರ ಶೀತ ವಾತಾವರಣ ಮುಂದುವರಿದಿದೆ.