ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ ವೇಳೆ ಹಿಂಸಾಚಾರ ಎಸಗಿ ಸಾರ್ವಜನಿಕ ಆಸ್ತಿ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯ ಶುಕ್ರವಾರ ನಮಾಜ್ ನಂತರ 6.27 ಲಕ್ಷ ರೂಪಾಯಿ ಚೆಕ್ ಅನ್ನು ಉತ್ತರಪ್ರದೇಶ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದೆ ಎಂದು ವರದಿ ತಿಳಿಸಿದೆ.
ಸಿಎಎ ವಿರೋಧಿ ಪ್ರತಿಭಟನೆಯ ಹಿಂಸಾಚಾರದಲ್ಲಿ ಸಾರ್ವಜನಿಕ ಆಸ್ತಿ ಹಾನಿಗೊಳಿಸಿದ್ದಕ್ಕೆ ದಂಡ ರೂಪದಲ್ಲಿ ಸಮುದಾಯದ ಎಲ್ಲರು ಹಣವನ್ನು ಸಂಗ್ರಹಿಸಿದ್ದು, ಈ ಹಣವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ ಎಂದು ಬುಲಂದ್ ಶಹರ್ ಮುಸ್ಲಿಂ ಸಮುದಾಯ ನಿಯೋಗದ ಸದಸ್ಯ ಹಾಜಿ ಅಕ್ರಮ್ ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿ ಹಾನಿಗೊಳಿಸಿದ ಬಗ್ಗೆ ಬೇಸರವಾಗಿದೆ. ಈ ಹಿನ್ನೆಲೆಯಲ್ಲಿ ನಾವೇ ಖುದ್ದಾಗಿ ನಷ್ಟ ಭರಿಸುವ ನಿಟ್ಟಿನಲ್ಲಿ 6.27 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರಿಸಿದ್ದೇವೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದರು.
ಆಸ್ತಿ ನಷ್ಟಕ್ಕೆ ದಂಡ ರೂಪದಲ್ಲಿ ಹಣ ನೀಡಿರುವ ಮುಸ್ಲಿಂ ಸಮುದಾಯದ ಕ್ರಮಕ್ಕೆ ಬುಲಂದ್ ಶಹರ್ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಶ್ಲಾಘಿಸಿದ್ದು, ಇದರಿಂದಾಗಿ ಮುಂದೆ ಇಂತಹ ಘಟನೆಗಳು ನಡೆಯದಂತೆ ತಡೆಯಲಿದೆ ಎಂದು ತಿಳಿಸಿದರು.