ಔಗಡೌಗು, ಡಿ.25- ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೋದಲ್ಲಿ ಜಿಹಾದಿಗಳು(ಇಸ್ಲಾಮಿಕ್ ಸ್ಟೇಟ್ ಉಗ್ರರು) ಮತ್ತೆ ವ್ಯಾಪಕ ಹಿಂಸಾಚಾರ ನಡೆಸಿದ್ದಾರೆ. ಭಾರೀ ಸಂಖ್ಯೆಯ ಶಸ್ತ್ರಸಜ್ಜಿತ ಭಯೋತ್ಪಾದಕರು ಏಕಕಾಲದಲ್ಲಿ ನಡೆಸಿದ ಎರಡು ದಾಳಿಗಳಲ್ಲಿ ಭಾರೀ ಸಾವು-ನೋವಾಗಿದೆ.
ನಾಗರಿಕ ಪ್ರದೇಶಗಳು ಮತ್ತು ಸೇನಾ ಶಿಬಿರಗಳನ್ನು ಗುರಿಯಾಗಿಟ್ಟುಕೊಂಡು ಉಗ್ರರ ನಡೆಸಿದ ಡಬಲ್ ಆಟ್ಯಾಕ್ನಲ್ಲಿ 35 ನಾಗರಿಕರು ಮತ್ತು ಏಳು ಯೋಧರು ಹತರಾಗಿದ್ದು, ಅನೇಕರು ತೀವ್ರ ಗಾಯಗೊಂಡಿದ್ದಾರೆ. ನಂತರ ನಡೆದ ಸೇನಾ ಕಾರ್ಯಾಚರಣೆಯಲ್ಲಿ 80ಕ್ಕೂ ಹೆಚ್ಚು ಜಿಹಾದಿಗಳನ್ನು ಕೊಲ್ಲಲಾಗಿದೆ.
ಈ ಹಿಂಸಾಚಾರದಲ್ಲಿ ಗಾಯಗೊಂಡಿರುವ ಅನೇಕರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಸೌಮ್ ಪ್ರಾಂತ್ಯದ ಅರ್ಬಿಂಡಾ ನಗರದ ಸೇನಾ ನೆಲೆ ಮತ್ತು ನಾಗರಿಕ ಪ್ರದೇಶಗಳ ಮೇಲೆ ಶಸ್ತ್ರಸಜ್ಜಿತ ಉಗ್ರರು ನಡೆಸಿರುವ ನರಮೇಧದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಸತಿ ಸ್ಥಳದಲ್ಲಿ ನಡೆದ ಆಕ್ರಮಣದಲ್ಲಿ ಮೃತಪಟ್ಟವರಲ್ಲಿ ಬಹುತೇಕರು ಮಹಿಳೆಯರು.
ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬುರ್ಕಿನಾ ಫಾಸೋ ಅಧ್ಯಕ್ಷ ರೋಕ್ ಮಾರ್ಕ್ ಕ್ರಿಶ್ಚಿಯನ್ ಕಬೋರ್, ಉಗ್ರರ ನಿಗ್ರಹ ಕಾರ್ಯಾಚರಣೆಯನ್ನು ಮತ್ತಷ್ಟು ಬಿರುಸುಗೊಳಿಸುವುದಾಗಿ ತಿಳಿಸಿದ್ದಾರೆ. ಭಯೋತ್ಪಾದಕರ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿ ಪ್ರಾಣತ್ಯಾಗ ಮಾಡಿರುವ ಹುತ್ಮಾತ ಯೋಧರ ಶೌರ್ಯವನ್ನು ಅವರು ಪ್ರಶಂಸಿಸಿದ್ದಾರೆ.
ನಾಗರಿಕ ಪ್ರದೇಶದ ಮೇಲೆ ನಡೆದ ದಾಳಿಯಲ್ಲಿ ಅನೇಕ ಮಹಿಳೆಯರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 20 ಯೋಧರೂ ಸೇರಿದಂತೆ ಅನೇಕರು ತೀವ್ರ ಗಾಯಗೊಂಡಿದ್ದಾರೆ. 18 ಗಂಟೆಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ ಎಂದು ವಾರ್ತಾ ಸಚಿವ ರೆಮಿಸ್ ಡಂಡಿಜಿನೋವು ತಿಳಿಸಿದ್ದಾರೆ.
ಪಶ್ಚಿಮ ಆಫ್ರಿಕಾದ ಮಾಲಿ ಮತ್ತು ನೈಗೆರ್ ಗಡಿ ಭಾಗದಲ್ಲಿರುವ ಬುರ್ಕಿನಾ ಫಾಸೋದಲ್ಲಿ ಕಳೆದ ಐದು ವರ್ಷಗಳಿಂದ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾ ಉಗ್ರರು ನಡೆಸುತ್ತಿರುವ ದಾಳಿಗಳಲ್ಲಿ ನೂರಾರು ಮಂದಿ ಬಲಿಯಾಗಿದ್ದು, ಅನೇಕರು ತೀವ್ರ ಗಾಯಗೊಂಡಿದ್ದಾರೆ.