ಹೊಸದಿಲ್ಲಿ: ಅಪರೂಪದ ಕಂಕಣ ಸೂರ್ಯಗ್ರಹಣವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದ್ದಾರೆ. ಎಕ್ಲಿಪ್ಸ್ ಗಾಗಲ್ಸ್ ಮೂಲಕ ಗ್ರಹಣವನ್ನು ವೀಕ್ಷಿಸಲು ಪ್ರಯತ್ನಿಸಿದ ಪ್ರಧಾನಿ ಮೋದಿ ಈ ಫೋಟೋಗಳನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಮೋಡದ ಹೊದಿಕೆಯಿಂದ ಗ್ರಹಣ ವೀಕ್ಷಣೆ ಸಾಧ್ಯವಾಗಲಿಲ್ಲ.
ಈ ಕುರಿತಾಗಿ ಟ್ವೀಟ್ ಮಾಡಿದ ಅವರು, “ಅನೇಕ ಭಾರತೀಯರಂತೆ ನಾನು ಕೂಡಾ ಕಂಕಣ ಸೂರ್ಯಗ್ರಹಣ ನೋಡಲು ಉತ್ಸುಕನಾಗಿದ್ದೆ. ಆದರೆ ದುರದೃಷ್ಟವಶಾತ್ ಮೋಡದ ಹೊದಿಕೆಯಿಂದಾಗಿ ನಾನು ಸೂರ್ಯನನ್ನು ನೋಡಲು ಸಾಧ್ಯವಾಗಲಿಲ್ಲ. ಆದರೆ ಕೇರಳದ ಕೋಝಿಕ್ಕೋಡ್ ಹಾಗೂ ಇತರ ಭಾಗಗಳಲ್ಲಿ ಗ್ರಹಣವನ್ನು ಲೈವ್ ಸ್ಟ್ರೀಮ್ ಮೂಲಕ ನೋಡಿದ್ದೇನೆ. ಎಂದ ಮೋದಿ ಈ ವಿಷಯದ ಬಗ್ಗೆ ತಜ್ಞರೊಂದಿಗೆ ನಡೆಸಿದ ಸಂವಹನ ತನ್ನ ಜ್ಞಾನವನ್ನು ಶ್ರೀಮಂತಗೊಳಿಸಿದೆ” ಎಂದಿದ್ದಾರೆ.
ಪ್ರಧಾನಿ ಮೋದಿ ಸೂರ್ಯಗ್ರಹಣ ನೋಡುತ್ತಿರುವ ಫೋಟೋವೊಂದನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯೊಬ್ಬರು ಇದು ಟ್ರೋಲ್ ಆಗಲಿದೆ ಎಂದಿದ್ದರು. ಈ ಟ್ವೀಟನ್ನು ಮರು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ “ಹಾಗಾದರೆ ಸ್ವಾಗತ, ಖುಷಿಪಡಿರಿ” ಎಂದಿದ್ದಾರೆ. ಪ್ರಧಾನಿ ಗ್ರಹಣ ವೀಕ್ಷಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.