ಕಲಬುರ್ಗಿ: ಇಂದು ಅಪರೂಪದ ಕಂಕಣ ಸೂರ್ಯಗ್ರಹಣ ಸಂಭವಿಸಿದ್ದು, ಜನರು ಕಾತರತೆಯಿಂದ ನೋಡಿ ಖುಷಿಪಟ್ಟಿದ್ದಾರೆ. ಜಗತ್ತಿನ ಹಲವೆಡೆ ಸೂರ್ಯ ಗ್ರಹಣ ಗೋಚರವಾಗಿದೆ. ರಾಜ್ಯದ ಜನರು ಸಹ 9 ವರ್ಷಗಳ ನಂತರ ಸಂಭವಿಸಿರುವ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಿದ್ದಾರೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿದೆ.
ಪ್ರಕೃತಿಯ ವಿಸ್ಮಯಗಳಲ್ಲಿ ಒಂದಾಗಿರುವ ಸೂರ್ಯ ಗ್ರಹಣದ ಹಿಂದೆ ವೈಜ್ಞಾನಿಕ ಹಿನ್ನೆಲೆ ಇದೆ. ಆದರೆ ಉತ್ತರ ಕರ್ನಾಟಕದ ಜನರು ಸೂರ್ಯಗ್ರಹಣದಂದು ಅಮಾನವೀಯ ಆಚರಣೆಯನ್ನು ಮಾಡಿದ್ದಾರೆ. ವಿಶೇಷಚೇತನ ಮಕ್ಕಳನ್ನು ಮಣ್ಣಿನಲ್ಲಿ ಹೂತಿಟ್ಟರೆ ಅಂಗವೈಕಲ್ಯ ಸರಿಯಾಗುತ್ತದೆ ಎಂಬ ಮೂಢನಂಬಿಕೆ ಇದೆ. ಹೀಗಾಗಿ ಜನರು ತಲೆ ಮಾತ್ರ ಕಾಣುವಂತೆ ವಿಶೇಷಚೇತನ ಮಕ್ಕಳನ್ನು ಮಣ್ಣಿನಲ್ಲಿ ಹೂತಿಟ್ಟಿದ್ದಾರೆ.
ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಅರ್ಜುಣಗಿಯಲ್ಲಿ ವಿಶೇಷಚೇತನ ಹುಡುಗನಿಗೆ ಅವನ ಕಾಲು ಸರಿ ಹೋಗಲು ಈ ರೀತಿ ಭೂಮಿಯಲ್ಲಿ ಗ್ರಹಣ ದಿವಸ ನಿಲ್ಲಿಸಿದ್ದಾರೆ. ಪಪ್ಪು ಕುತುಬುದ್ಧೀನ್ ಮುಲ್ಲಾ (22) ಹೂತಿಟ್ಟ ವಿಶೇಷಚೇತನ ಯುವಕ. ಸೂರ್ಯಗ್ರಹಣದಂದು ವಿಶೇಷಚೇತನರನನ್ನು ಕತ್ತಿನವರೆಗೆ ಹೂತಿಟ್ಟರೆ ಅಂಗವಿಕಲತೆ ಮಾಯವಾಗುತ್ತದೆ ಎಂಬ ನಂಬಿಕೆ ಇದೆಯಂತೆ. ಹೀಗಾಗಿ ಪೋಷಕರು ಮೌಢ್ಯಕ್ಕೆ ಮೊರೆ ಹೋಗಿದ್ದಾರೆ. ಹೂತಿಟ್ಟ ದೃಶ್ಯ ನೋಡಲು ಗ್ರಾಮದ ಜನರು ಮುಗಿಬಿದ್ದಿದ್ದರು.
ಈ ಮೌಢ್ಯಾಚರಣೆಯ ವಿಜಯಪುರ ಮಾತ್ರವಲ್ಲದೇ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ನಡೆದಿದೆ.
ಇನ್ನು, ಕಲಬುರ್ಗಿ ಜಿಲ್ಲೆಯಲ್ಲಿ ಕೂಡ ಇದೇ ರೀತಿಯ ಅಮಾನವೀಯ ಆಚರಣೆ ನಡೆದಿದೆ. ಜಿಲ್ಲೆಯ ತಾಜ್ ಸುಲ್ತಾನ್ಪುರ ಗ್ರಾಮದಲ್ಲಿ ಪೋಷಕರು ತಮ್ಮ ವಿಶೇಷಚೇತನ ಮಕ್ಕಳನ್ನು ಕುತ್ತಿಗೆಯವರೆಗೆ ತಿಪ್ಪೆಗುಂಡಿಯಲ್ಲಿ ಹೂತಿಟ್ಟಿದ್ದಾರೆ. ಹೀಗೆ ಹೂತಿಟ್ಟರೆ ಗುಣಮುಖರಾಗುತ್ತಾರೆ, ಅಂಗವೈಕಲ್ಯ ಹೋಗುತ್ತದೆ ಎಂಬ ನಂಬಿಕೆ ಇದೆಯಂತೆ. ಗ್ರಹಣ ಆರಂಭದಿಂದ ಗ್ರಹಣ ಮುಗಿಯುವರೆಗೆ ಹೀಗೆ ಮಕ್ಕಳನ್ನು ಹೂತಿಟ್ಟಿದ್ದಾರೆ.ಇಂದಿನ ಡಿಜಿಟಲ್ ಯುಗದಲ್ಲಿ ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೂಡ ಕೆಲವು ಮೂಢನಂಬಿಕೆಗಳಿಗೆ ಜನರು ಕಟ್ಟುಬಿದ್ದಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.