ಬೆಂಗಳೂರು, ಡಿ.26- ಸೌರಮಂಡಲದ ಅತ್ಯಂತ ಅಪರೂಪದ ಕಂಕಣ ಸೂರ್ಯಗ್ರಹಣ ಇಂದು ವಿಶ್ವದ ವಿವಿಧೆಡೆ ಘಟಿಸಿದ್ದು, ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಈ ವಿಸ್ಮಯವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಚಕಿತಗೊಂಡರು.
ಬೆಳಗ್ಗೆ 8.04ಕ್ಕೆ ಆರಂಭವಾದ ಸೂರ್ಯಗ್ರಹಣ ಬೆಳಿಗ್ಗೆ 11.11ಕ್ಕೆ ಅಂತ್ಯಗೊಂಡಿತು. ಸೂರ್ಯನ ಸುತ್ತ ಬೆಂಕಿಯುಂಗುರದ ಈ ಅಪರೂಪದ ವಿದ್ಯಮಾನವನ್ನು ಅನೇಕ ಮಂದಿ ಸುರಕ್ಷಿತ ಸಾಧನಗಳ ಮೂಲಕ ಕಣ್ತುಂಬಿಕೊಂಡರು. ಇದು 2019ರ ಕೊನೆಯ ಮತ್ತು ಅದ್ಭುತ ಸೂರ್ಯಗ್ರಹಣ ಎನಿಸಿದೆ.
ವಿಶೇಷವೆಂದರೆ, ಭಾರತದಲ್ಲೇ ಅತೀ ಹೆಚ್ಚು ಸ್ಪಷ್ಟವಾಗಿ ಗ್ರಹಣ ಗೋಚರಿಸಿದೆ. ಅದರಲ್ಲಿಯೂ ನಿರ್ದಿಷ್ಟವಾಗಿ ಕರ್ನಾಟಕದಲ್ಲಿ ಮೈಸೂರು, ಮಂಗಳೂರು ಹಾಗೂ ಮಡಿಕೇರಿಯಲ್ಲಿ ಅತ್ಯಂತ ಸ್ಪಷ್ಟವಾಗಿ ಗೋಚರಿಸಿದೆ.
ಆದರೆ, ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣವಿದ್ದ ಕಾರಣ ಕಂಕಣ ಸೂರ್ಯಗ್ರಹಣದ ರೋಚಕ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದವರಿಗೆ ನಿರಾಸೆಯಾಯಿತು.
ಕಂಕಣದ ಸ್ಪರ್ಶಕಾಲ ಬೆಳಗ್ಗೆ 8 ಗಂಟೆ 4 ನಿಮಿಷ. ಮಧ್ಯ ಕಾಲ 9.28 ನಿಮಿಷ ಹಾಗೂ ಮೋಕ್ಷ ಕಾಲ 11.5 ನಿಮಿಷ. ಸೂರ್ಯನ ಸುತ್ತ ಬೆಂಕಿಯ ಬಳೆ ಸೃಷ್ಟಿ ಸಮಯ 9.24ರಿಂದ 9.29ರವರೆಗೆ ವಿಶ್ವದ ವಿವಿಧೆಡೆ ಸ್ಪಷ್ಟವಾಗಿ ಗೋಚರಿಸಿತು ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಈ ಅಪರೂಪದ ಖಗೋಳ ಕೌತುಕ ವಿಶ್ವದಲ್ಲೆಡೆ ಒಂದೇ ರೀತಿ ಕಾಣಿಸಲಿಲ್ಲ. ಕೆಲವೆಡೆ ಫೈರ್ರಿಂಗ್ ಗೋಚರಿಸಿದರೆ, ಕೆಲವೆಡೆ ಸೂರ್ಯ ಭಾಗಶಃ ಕತ್ತರಿಸಲ್ಪಟ್ಟಂತೆ ಕಂಡುಬಂತು.
ಭಾರತದಲ್ಲಿ ತಮಿಳುನಾಡು, ಕೇರಳ, ಕರ್ನಾಟಕ ಭಾಗಗಳಲ್ಲಷ್ಟೇ ಕಂಕಣ ಸೂರ್ಯಗ್ರಹಣದ ದರ್ಶನದಿಂದ ಆಸಕ್ತರು ಚಕಿತರಾದರು. ಉಳಿದೆಡೆ ಭಾಗಶಃ ಸೂರ್ಯಗ್ರಹಣದ ದರ್ಶನ ಜನರಿಗೆ ಲಭಿಸಿದೆ.
ಸೌದಿ ಅರೇಬಿಯಾದ ದುಬೈ ಮತ್ತು ಅಬುದಾಭಿಯಲ್ಲಿ ಸೂರ್ಯನ ಬೆಂಕಿಯುಂಗುರ ಸ್ಪಷ್ಟವಾಗಿ ಗೋಚರಿಸಿತು. ಶ್ರೀಲಂಕಾದ ಕೊಲಂಬೋ, ಫಿಲಿಪ್ಪೈನ್ಸ್, ಸಿಂಗಪುರ್, ಸೌದಿ ಮಲೇಶಿಯಾ, ಇಂಡೋನೇಷ್ಯಾ, ಆಫ್ರಿಕಾ ದೇಶಗಳಲ್ಲಿ ಕೂಡ ಕಂಕಣ ಸೂರ್ಯಗ್ರಹಣ ಕಾಣಸಿಗಲಿದೆ. ಆಸ್ಟ್ರೇಲಿಯಾ ಸೇರಿದಂತೆ ಹಲವೆಡೆ ಸೌರ ಕೌತುಕ ವಿಶೇಷ ಗಮನ ಸೆಳೆಯಿತು.
ಕೇರಳದ ಕೊಚ್ಚಿನ್, ವಯನಾಡು, ತಮಿಳುನಾಡಿನ ಚೆನ್ನೈ, ಕೊಯಮತ್ತೂರು, ಮಧುರೈ, ಊಟಿ, ಗುಜರಾತ್ನ ಅಹಮದಾಬಾದ್, ಒಡಿಶಾದ ಭುವನೇಶ್ವರ ಮೊದಲಾದ ನಗರಗಳಲ್ಲಿ ಸ್ಪಷ್ಟತೆಯಿಂದ ಭಾಗಶಃ ಸೂರ್ಯಗ್ರಹಣ ವೀಕ್ಷಕರಿಗೆ ಗೋಚರಿಸಿತು.
ಸುರಕ್ಷಿತ ಸಾಧನಗಳ ಮೂಲಕ ಜನರು ಬೆಳಗ್ಗೆ 8 ಗಂಟೆಯಿಂದ 11.15ರ ವರೆಗೆ ಆಗಸದತ್ತ ವೀಕ್ಷಿಸಿ ಬೆರಗಾದರು.
ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ಅಂತರಗಳ ಪ್ರಕಾರ ಸೂರ್ಯನ ಕೋನೀಯ ಗಾತ್ರವು ಚಂದ್ರನಿಗಿಂತ ದೊಡ್ಡದಾಗಿತ್ತು. ಹಾಗಾಗಿ ಸೂರ್ಯ ಬಳೆಯಂತೆ ಗೋಚರಿಸಿದ. ಪೂರ್ಣ ಛಾಯಾಶಂಕುವನ್ನು ದಾಟಿದ ಪ್ರದೇಶದಲ್ಲಿರುವ ಜನರಿಗೆ ಕಂಕಣ ಸೂರ್ಯಗ್ರಹಣ ಕಾಣಿಸಿತು.
ಸೂರ್ಯ, ಭೂಮಿಯ ಮಧ್ಯೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಗ್ರಹಣಗಳಲ್ಲಿ ಪೂರ್ಣ, ಪಾಶ್ರ್ವ, ಕಂಕಣ ಎಂಬ 3 ವಿಧಗಳಿವೆ. ಕಂಕಣ ಗ್ರಹಣದಲ್ಲಿ ಸೂರ್ಯನನ್ನು ಚಂದ್ರ ಪೂರ್ಣವಾಗಿ ಮರೆ ಮಾಡುವುದಿಲ್ಲ. ಗ್ರಹಣವಾದಾಗ ಚಂದ್ರನ ಸೂತ್ತಲೂ ಬೆಳಕು ತೂರಿ ಬಂದು ಹೊಳೆಯುವ ಬಂಗಾರದ ಬಳೆಯಾಕಾರದಲ್ಲಿ ಸೂರ್ಯ ಗೋಚರಿಸುತ್ತಾನೆ. ಇದೇ ಕಂಕಣ ಸೂರ್ಯಗ್ರಹಣ.