ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಬೇಡಿಕೆ- ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತೊಂದು ವಿಘ್ನ

ಬೆಂಗಳೂರು,ಡಿ.26- ಕೇಂದ್ರ ಸರ್ಕಾರದ ನಾಗರಿಕತ್ವ ತಿದ್ದುಪಡಿ ಕಾಯ್ದೆಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತೊಂದು ವಿಘ್ನ ಎದುರಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಏಕೆಂದರೆ ಜನಸಂಖ್ಯೆಗೆ ಅನುಗುಣವಾಗಿ ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಬೇಕೆಂಬ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸರ್ಕಾರಕ್ಕೆ ಇದು ಭಾರೀ ಗಂಡಾಂತರವನ್ನೇ ತರುವ ಲಕ್ಷಣಗಳು ಕಂಡುಬರುತ್ತಿದೆ.

ನಮ್ಮ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡದಿದ್ದರೆ ಸರ್ಕಾರದಲ್ಲಿರುವ ಎಲ್ಲ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ವಾಲ್ಮೀಕಿ ಸಮುದಾಯದ ಶಾಸಕರು ಬೆದರಿಕೆ ಹಾಕುತ್ತಿರುವುದು ಯಡಿಯೂರಪ್ಪನವರ ಕುರ್ಚಿಯನ್ನೇ ಅಲುಗಾಡುವಂತೆ ಮಾಡಿದೆ.

ಮೀಸಲಾತಿ ನೀಡುವ ಬಗ್ಗೆ ಖುದ್ದು ವಾಲ್ಮೀಕಿ ಸಮುದಾಯದ ಮಠಾಧಿಪತಿಗಳು ಕೂಡ ಬೀದಿಗಿಳಿದಿರುವುದರಿಂದ ಸರ್ಕಾರ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದೆ.

ರಾಜ್ಯದಲ್ಲಿ ವೀರಶೈವ ಲಿಂಗಾಯಿತ, ಒಕ್ಕಲಿಗ, ಕುರುಬ, ಪರಿಶಿಷ್ಟ ಜಾತಿ ನಂತರ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ವಾಲ್ಮೀಕಿ ಸಮುದಾಯದಿಂದ ಒಟ್ಟು 17 ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಆಡಳಿತರೂಢ ಬಿಜೆಪಿಯಿಂದ ಸಚಿವರಾದ ಶ್ರೀರಾಮುಲು, ಶಿವನಗೌಡ ನಾಯಕ್, ರಾಜುಗೌಡ ನಾಯಕ್, ರಮೇಶ್ ಜಾರಕಿಹೊಳಿ, ಎನ್.ವೈ.ಗೋಪಾಲಕೃಷ್ಣ, ಎಸ್.ವಿ.ರಾಮಚಂದ್ರ, ಸೋಮಲಿಂಗಪ್ಪ ಹಾಗೂ ಬಾಲಚಂದ್ರ ಜಾರಕಿಹೊಳಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‍ನಿಂದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಬಿ.ನಾಗೇಂದ್ರ, ಕಂಪ್ಲಿ ಗಣೇಶ್, ಬಸವನಗೌಡ ದದ್ದಲ್, ತುಕಾರಾಂ, ರಘುಮೂರ್ತಿ, ಅನಿಲ್ ಚಿಕ್ಕಮಾದು, ಜೆಡಿಎಸ್‍ನಿಂದ ಮಾನ್ವಿ ಕ್ಷೇತ್ರದ ರಾಜು ವೆಂಕಟಪ್ಪ ನಾಯಕ್ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರತಾಪ್ ಗೌಡ ಪಾಟೀಲ್ ಆಯ್ಕೆಯಾಗಿದ್ದರು.
ಬಿಜೆಪಿಯಿಂದಲೇ 8 ಶಾಸಕರು ಆಯ್ಕೆಯಾಗಿದ್ದು, ಶೇ.7.5ರಷ್ಟು ಮೀಸಲಾತಿ ನೀಡಬೇಕೆಂಬ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮೊದಲು ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ಕೂಗು ಕೇಳಿಬಂದಿತ್ತು.

ಆದರೆ ಸರ್ಕಾರದಲ್ಲಿ ಮೂವರು ಡಿಸಿಎಂ ಸ್ಥಾನಗಳನ್ನು ನೀಡಲಾಯಿತಾದರೂ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಲಾಯಿತು ಎಂಬ ಆರೋಪ ಕೇಳಿಬಂದಿತ್ತು.

ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ಮಠಾಧೀಶರು, ಶಾಸಕರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡದಿದ್ದರೆ ಸಮುದಾಯದ ಎಲ್ಲ ಶಾಸಕರು ರಾಜೀನಾಮೆ ನೀಡುವುದಾಗಿ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಕೆ ಕೊಟ್ಟಿದ್ದರು.

ಈ ಸಂಬಂಧ ರಾಜ್ಯ ಸರ್ಕಾರ ಮೀಸಲಾತಿ ನೀಡುವ ಕುರಿತಂತೆ ಹೈಕೋರ್ಟ್ ನಿವೃತ್ತ ಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ವರದಿ ನೀಡುವಂತೆ ಸೂಚನೆ ಕೊಟ್ಟಿತ್ತು.

ಸಮಿತಿಯು ಈಗಾಗಲೇ ಮೂರ್ನಾಲ್ಕು ಬಾರಿ ಸಭೆ ನಡೆಸಿ ಅಭಿಪ್ರಾಯ ಪಡೆದಿದೆಯಾದರೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಇದೀಗ ಮತ್ತೆ ಆ ಸಮುದಾಯದ ಮಠಾಧಿಪತಿಗಳು ಹಾಗೂ ಮುಖಂಡರು ಮೀಸಲಾತಿ ಕೊಡಬೇಕೆಂಬ ಬೇಡಿಕೆಗೆ ಕಿಚ್ಚು ಹಚ್ಚುತ್ತಿದ್ದಾರೆ.

ನನಗೆ ಉಪಮುಖ್ಯಮಂತ್ರಿ ಹುದ್ದೆಗಿಂತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ನಮ್ಮ ಸಮಾಜಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡದಿದ್ದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಖಚಿತ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಇವರಿಗೆ ಧ್ವನಿಗೂಡಿಸಿರುವ ಮತ್ತೊಬ್ಬ ಶಾಸಕ ರಾಜುಗೌಡ ನಾಯಕ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ನನಗೆ ಸಚಿವ ಸ್ಥಾನ ನೀಡದಿದ್ದರೂ ಚಿಂತೆಯಿಲ್ಲ. ನಮ್ಮ ಸಮಾಜದ ಬೇಡಿಕೆಯಂತೆ ಮೀಸಲಾತಿ ಹೆಚ್ಚಳ ಮಾಡದಿದ್ದರೆ ರಾಜೀನಾಮೆ ನೀಡುತ್ತೇವೆ ಎಂದು ಗುಡುಗಿದ್ದಾರೆ.

ಹೀಗೆ ವಾಲ್ಮೀಕಿ ಸಮುದಾಯಕ್ಕೆ ಶೇ. 7.5ರಷ್ಟು ಮೀಸಲಾತಿ ನೀಡಬೇಕೆಂಬ ಒತ್ತಡ ಹೆಚ್ಚಾಗುತ್ತಿರುವುದು ಆಡಳಿತಾರೂಢ ಬಿಜೆಪಿಯನ್ನು ಇಬ್ಬಂದಿಗೆ ಸಿಲುಕಿಸಿದೆ.

ಒಂದು ವೇಳೆ ಒತ್ತಡಕ್ಕೆ ಮಣಿದು ಹಾಲಿ ಇರುವ ಮೀಸಲಾತಿಯನ್ನು ಹೆಚ್ಚಳ ಮಾಡಿದರೆ ಮುಂದಿನ ದಿನಗಳಲ್ಲಿ ಬೇರೆ ಸಮುದಾಯದವರು ಇದೇ ರೀತಿ ಬೇಡಿಕೆಯನ್ನು ಮುಂದಿಟ್ಟರೆ ಗತಿಯೇನು ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

ಈ ಎಲ್ಲಾ ಹೈರಾಣಗಳಿಂದ ಇಕ್ಕಟ್ಟಿಗೆ ಸಿಲುಕಿರುವ ಸಿಎಂ ಯಡಿಯೂರಪ್ಪ ಮುಂದೇನು ಮಾಡಬೇಕೆಂಬ ಚಿಂತೆಯಲ್ಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ