ಹುಬ್ಬಳ್ಳಿ, ಡಿ.25-ಪೌರತ್ವ ಎಂಬುದು ರಾಷ್ಟ್ರೀಯ ವಿಷಯವಾಗಿದ್ದು, ಈ ಹೋರಾಟಕ್ಕೆ ಒಂದು ಜಾತಿ ಮೀಸಲಲ್ಲ. ಆದರೆ ಇದನ್ನು ಅಪಪ್ರಚಾರ ಮಾಡಲಾಗುತ್ತಿದ್ದು, ಈ ಬಗ್ಗೆ ಸರ್ವ ಸಮ್ಮತವಾಗಿ ತೀರ್ಮಾನಿಸಬೇಕು. ಈ ದೃಷ್ಟಿಯಿಂದ ಸರ್ವ ಪಕ್ಷಗಳ ಸಭೆ ಕರೆದು ಸಮಾಲೋಚಿಸಿ ಬಗೆಹರಿಸಬೇಕೆಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಹಳಷ್ಟು ಬೆಳವಣಿಗೆ ಆಗುತ್ತಿದ್ದು, ಕೆಲವೊಂದು ಆಘಾತವನ್ನು ತರುವಂತ, ಮನಸ್ಸಿಗೆ ಘಾಸಿ ಮಾಡುವಂತ ಘಟನೆಗಳು ನಡೆಯುತ್ತಿವೆ. ಮೋದಿ ಮತ್ತು ಅಮಿತ್ ಷಾ ಜಾತಿ ಇಟ್ಟುಕೊಂಡು ಮಾಡಲಿಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಹೋರಾಟಕ್ಕೆ ಕೇವಲ ಒಂದು ಜಾತಿ ಮೀಸಲಿಲ್ಲ. ಆದರೆ ಇದನ್ನು ಅಪಪ್ರಚಾರ ಮಾಡುತ್ತಿದ್ದು, ಬಡವರ ಮತ್ತು ಶ್ರಮಜೀವಿಗಳನ್ನು ಅವಮಾನಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಉದ್ಧವ ಠಾಕ್ರೆ ಕ್ಷಮೆ ಕೇಳಬೇಕು : ಗಡಿ ವಿವಾದ ಕುರಿತ 15 ದಿನಗಳಿಂದ ಉದ್ಧವ ಠಾಕ್ರೆ ಕಾನೂನು ಹೋರಾಟ ಮತ್ತು ರಾಜಕೀಯ ಮಾಡಲು ಇಬ್ಬರು ಸಚಿವರನ್ನು ನೇಮಕ ಮಾಡಿದ್ದಾರೆ. ಇದಕ್ಕೆ ಟೀಮ ಮಾಡಿ ಹೋರಾಟವನ್ನು ತೀವ್ರಗೊಳಿಸಿ ಎಂದು ಆದೇಶ ನೀಡಿದ್ದಾರೆ. ಇದರ ಬಗ್ಗೆ ನಾಗಪುರ ಸೆಷನ್ನಲ್ಲಿ ಉದ್ಧವ ಠಾಕ್ರೆ ಬೆಳಗಾವಿ, ಕಾರವಾರ, ನಿಪ್ಪಣಿ ಬಗ್ಗೆ ಮಾತನಾಡಿ ಕರ್ನಾಟಕದ ಈ ಮೂರು ಪ್ರದೇಶಗಳು ಆಕ್ರಮಿತ ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ಹಿಂದೆ ಮಹತ್ಮಾಗಾಂಧಿ, ಇಂದಿರಾಗಾಂಧಿ ಬೆಳಗಾವಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದು ಎಂದು ತಿಳಿಸಿದ್ದಾರೆ. ಈಗ ಬೆಳಗಾವಿ ನಮ್ಮದು ಎಂದು ಠಾಕ್ರೆ ಹೇಳಿರುವುದು ಸರಿಯಲ್ಲ. ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಇನ್ನೂ ಗಡಿ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಈ ರೀತಿಯ ಬೆಳವಣಿಗೆ ಆದರೂ ಕೂಡ ನಮ್ಮ ರಾಜ್ಯದ ಸಿಎಂ ಹಾಗೂ ಸಚಿವರು ಮಾತನಾಡದೇ ಇರುವುದು ಏಕೆ? ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಎಚ್ಚರಿಸಿದ್ದೇನೆ. ಗಡಿ ವಿಚಾರದಲ್ಲಿ ಯಾಕೆ ಶಾಂತ ಆಗಿದ್ದೀರಿ, ಇಂತಹ ವಿಚಾರದಲ್ಲಿ ಕೂಡಲೇ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ ಸರಿಯಾದ ಪಾಠ ಕಲಿಸಬೇಕು ಎಂದು ತಿಳಿಸಿದರು.
ಸ್ವತಂತ್ರ ತನಿಖೆಯಾಗಲಿ:
ಮಂಗಳೂರು ಗಲಭೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಎಚ್. ಕೆ.ಪಾಟೀಲ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿಯೇ ಮಂಗಳೂರಿನಲ್ಲಿ ವಿಡಿಯೋ ಹರಿಬಿಟ್ಟಿದೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರಕ್ಕೆ ಶಾಂತಿ ಸುವ್ಯವಸ್ಥಿತ ಕಾಪಾಡುವ ಉದ್ದೇಶವಿದ್ದರೆ ಈ ರೀತಿಯ ನಡೆದುಕೊ ಳ್ಳುತ್ತಿರಲಿಲ್ಲ. ಆದರೆ ಈ ಗಲಭೆ ಕುರಿತು ರಾಜ್ಯ ಸರ್ಕಾರದ ಅಧೀನ ಸಂಸ್ಥೆ ಅಥವಾ ಇಲಾಖೆಯಿಂದ ನಡೆಸಬಾರದು, ಸ್ವತಂತ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಈ ಗಲಭೆಯ ಕೆಸರರೆಚಾಟದಲ್ಲಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಪರಿಸ್ಥಿತಿ ಮರೆತು ಹೋಯಿತು ಎಂದು ವಿಷಾದ ವ್ಯಕ್ತಪಡಿಸಿದರು.