
ಬೆಂಗಳೂರು, ಡಿ.24- ಮುತ್ತೂಟ್ ಫೈನಾನ್ಸ್ ಕಚೇರಿಗೆ ಕನ್ನ ಹಾಕಿರುವ ಕಳ್ಳರು 16 ಕೋಟಿ ರೂ. ಮೌಲ್ಯದ ಸುಮಾರು 70 ಕೆಜಿ ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ.
ಪುಲಕೇಶಿನಗರ ಠಾಣೆ ವ್ಯಾಪ್ತಿಯ ಹೆಣ್ಣೂರು -ಬಾಣಸವಾಡಿ ರಸ್ತೆಯ ಲಿಂಗರಾಜಪುರಂನ ಮುತ್ತೂಟ್ ಫೈನಾನ್ಸ್‍ನ ಕಚೇರಿಯ ಬಾತ್‍ರೂಮ್‍ನಿಂದ ಕನ್ನ ಕೊರೆದು ಕಳ್ಳತನ ಮಾಡಲಾಗಿದೆ.
ಫೈನಾನ್ಸ್ ಕಚೇರಿ ಒಳ ನುಗ್ಗಿರುವ ಕಳ್ಳರು ಬೀರು, ಕಬೋರ್ಡ್‍ಗಳನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಿ ಅಲ್ಲಿದ್ದ ಚಿನ್ನವನ್ನು ದೋಚಿದ್ದಾರೆ.
ಚಿನ್ನವನ್ನು ಗಿರವಿ ಇಟ್ಟುಕೊಂಡು ಸಾಲ ನೀಡುವ ಲೇವಾದೇವಿ ವ್ಯವಹಾರ ಮಾಡುತ್ತಿದ್ದ ಮುತ್ತೂಟ್ ಫೈನಾನ್ಸ್, ಸಾಲದ ಅವಧಿ ಮೀರಿದ್ದ ಚಿನ್ನಾಭರಣಗಳು ಸೇರಿದಂತೆ ಸಾರ್ವಜನಿಕರು ಗಿರವಿ ಇಟ್ಟ ಒಡವೆಗಳನ್ನು ದಾಸ್ತಾನು ಮಾಡಿಕೊಂಡಿತ್ತು.
ಕಳ್ಳತನಕ್ಕೂ ಮೊದಲು ದುಷ್ಕರ್ಮಿಗಳು ಸಿಸಿಟಿವಿ ಸಂಪರ್ಕವನ್ನು ಕಡಿತಗೊಳಿಸಿರುವುದು ಕಂಡು ಬಂದಿದೆ. ಪುಲಕೇಶಿನಗರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಚಿನ್ನ ದೋಚಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.