ಮಂಗಳೂರು,ಡಿ.25- ಇಬ್ಬರ ಸಾವಿನ ನಂತರ ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ತೀರಪ್ರದೇಶದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೋಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ.
ಕಾನೂನು ಸುವ್ಯವಸ್ಥೆ ಕುರಿತಂತೆ ಇಲ್ಲಿನ ಸರ್ಕಿಟ್ ಹೌಸ್ನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಜಿಲ್ಲಾಧಿಕಾರಿ ಸಿಂಧು.ಬಿ ರೂಪೇಶ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ್ ಕಾಮತ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಮತ್ತಿತರ ಜೊತೆ ಸಭೆ ನಡೆಸಿದರು.
ಕರಾವಳಿ ತೀರಪ್ರದೇಶ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಕಿಡಿಗೇಡಿಗಳು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಮೊನ್ನೆ ನಡೆದ ಘಟನೆ ಇದಕ್ಕೊಂದು ನಿದರ್ಶನವಾಗಿದೆ. ಮುಂದೆ ಇವು ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಸೂಚನೆ ಕೊಟ್ಟರು.
ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಚೆಕ್ಪೋಸ್ಟ್ ಗಳು, ಬಂದರು, ವಿಮಾನ, ರೈಲು ನಿಲ್ದಾಣಗಳಲ್ಲಿ ನಗರಕ್ಕೆ ಬರುವ ಮತ್ತು ಹೊರ ಹೋಗುವವರ ಮೇಲೆ ಹದ್ದಿನಕಣ್ಣಿಡಬೇಕು. ಅನ್ಯರಾಜ್ಯಗಳಿಂದ ಸಮಾಜಘಾತುಕ ಶಕ್ತಿಗಳು ಬಂದು ಗಲಭೆ ನಡೆಸಲು ಷಡ್ಯಂತರ ನಡೆಸುತ್ತವೆ. ಈ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ಮಾಡಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿಂಸಾತ್ಮಕ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜನೆ ಮಾಡುವಂತೆಯೂ ಪೋಲೀಸರಿಗೆ ನಿರ್ದೇಶನ ನೀಡಿದ್ದಾಗಿ ಹೇಳಿದರು.
ಮೇಲ್ನೋಟಕ್ಕೆ ಮಂಗಳೂರು ಗಲಭೆ ವ್ಯವಸ್ಥಿತವಾದ ಷಡ್ಯಂತರ ಎಂಬುದು ಕಂಡುಬಂದಿದೆ. ಉದ್ದೇಶಪೂರ್ವಕವಾಗಿಯೇ ಸಂಚು ನಡೆಸಿ ಗಲಭೆ ನಡೆಸಿದ್ದಾರೆ. ಇಂಥವರ ಮೇಲೆ ಹದ್ದಿನ ಕಣ್ಣಿಡುವಂತೆ ಪೋಲೀಸರಿಗೆ ಸೂಚಿಸಿದ್ದಾಗಿ ತಿಳಿಸಿದರು.
ಪ್ರತಿಪಕ್ಷಗಳ ಆರೋಪಕ್ಕೆ ಸಿಸಿಟಿವಿಯಲ್ಲಿ ಬಿಡುಗಡೆಯಾಗಿರುವ ದೃಶ್ಯಾವಳಿಗಳೇ ಉತ್ತರ ನೀಡಿವೆ. ಅವರ್ಯಾರು ಅಮಾಯಕರಲ್ಲ. ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿ ಶಾಂತಿಪ್ರಿಯವಾದ ಕರ್ನಾಟಕವನ್ನು ಹಾಳು ಮಾಡಲು ಯತ್ನಿಸಿದ್ದಾರೆ. ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಬಿಎಸ್ವೈ ಗುಡುಗಿದರು.