
ನವದೆಹಲಿ, ಡಿ.25- ಶಾಂತಿಧೂತ ಏಸು ಕ್ರಿಸ್ತ ಜನ್ಮದಿನವಾದ ಕ್ರಿಸ್‍ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ದೇಶಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಕಳೆದ ರಾತ್ರಿಯಿಂದಲೇ ಚರ್ಚ್‍ಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆಗಳು ನಡೆಯಿತು. ಬೆಳಗ್ಗೆ ಮೇಣದ ಬತ್ತಿಗಳನ್ನು ಹಚ್ಚಿ ಶಾಂತಿಧೂತ ಏಸುವಿನ ಪ್ರಾರ್ಥನಾ ಗೀತೆಗಳನ್ನು ಹಾಡಲಾಯಿತು. ನಂತರ ಸಿಹಿ ಹಂಚಿ ಹಬ್ಬ ಆಚರಿಸಿ ಸಡಗರ ವಿನಿಮಯ ಮಾಡಿಕೊಳ್ಳಲಾಯಿತು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ , ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಂಪುಟ ಸಚಿವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ , ಮಾಜಿ ಪ್ರಧಾನಿಗಳಾದ ಡಾ.ಮನಮೋಹನಸಿಂಗ್, ಎಚ್.ಡಿ.ದೇವೇಗೌಡ ಹಾಗೂ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಮತ್ತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಕ್ರೈಸ್ತ ಬಾಂಧವರಿಗೆ ಕ್ರಿಸ್‍ಮಸ್ ಶುಭ ಸಂದೇಶ ನೀಡಿದ್ದಾರೆ. ಜೀಸಸ್ ಕ್ರೈಸ್ಟ್ ಅವರ ಶಾಂತಿ ಮಂತ್ರವನ್ನು ಸ್ಮರಿಸೋಣ. ಅವರ ಶಾಂತಿ ಸಂಯಮ ಮತ್ತು ಮಹಾ ಆದರ್ಶಗಳನ್ನು ಎಲ್ಲರೂ ಪಾಲಿಸೋಣ ಎಂದು ಗಣ್ಯಾತಿಗಣ್ಯರು ಟ್ವೀಟ್ ಮಾಡಿದ್ದಾರೆ.
ಗೋವಾ, ಪಶ್ಚಿಮ ಬಂಗಾಳ, ನವದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಪುದುಚೇರಿ, ಆಂಧ್ರಪ್ರದೇಶ ಮತ್ತು ಈಶಾನ್ಯ ಪ್ರಾಂತ್ಯಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸಡಗರ, ಸಂಭ್ರಮದಿಂದ ಕ್ರಿಸ್‍ಮಸ್ ಆಚರಿಸಲಾಗುತ್ತಿದೆ.
ಶಾಂತಿಧೂತ ಯೇಸು ಕ್ರಿಸ್ತನ ಆರಾಧನೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.
ಚರ್ಚ್‍ಗಳು, ಇಗರ್ಜಿಗಳು, ಮನೆ ಮನೆಗಳಲ್ಲಿ ನಕ್ಷತ್ರಗಳ ಮಿಂಚು, ಬಲೂನ್‍ಗಳು ಕಂಗೊಳಿಸಿದವು. ಕ್ರೈಸ್ತ ಬಾಂಧವರು ಕ್ರಿಸ್ಮಸ್ ಟ್ರೀಗಳನ್ನು ಜೋಡಿಸಿದ್ದರು. ಕ್ಯಾಥೊಲಿಕ್ ಮತ್ತು ಪ್ರಾಟಿಸ್ಟೆಂಟ್ ಚರ್ಚ್‍ಗಳು ವಿಶೇಷವಾಗಿ ಅಲಂಕಾರಗೊಂಡಿದ್ದವು. ಯಾವುದೇ ಜಾತಿ, ಮತ, ಪಂಥ, ವರ್ಗ ಬೇಧವಿಲ್ಲದೆ ಸಂತ ಯೇಸು ಕ್ರಿಸ್ತನನ್ನು ಆರಾಸಲು ಸಾವಿರಾರು ಜನರು ಚರ್ಚ್‍ಗಳಿಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಹಚ್ಚ ಹಸಿರಿನ ಅಲಂಕೃತ ದೇವ ವೃಕ್ಷಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿತ್ತು. ಬಾಲ ಯೇಸುವಿನ ವಿಭಿನ್ನ ನಮೂನೆಯ ಗೋದಲಿಗಳು, ಸಾಂತಾಕ್ಲಾಸ್ ಪ್ರತಿಕೃತಿಗಳು, ಶುಭ ಸಂದೇಶದ ಘಂಟೆ ಹೀಗೆ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಚರ್ಚೆಗಳಲ್ಲಿ ವಿಶೇಷವಾಗಿ ಸಿಂಗಾರಗೊಂಡಿದ್ದವು. ವಿವಿಧ ಕ್ರೈಸ್ತ ಸಮುದಾಯದವರು, ಸಂಘ-ಸಂಸ್ಥೆಗಳು ಕ್ರಿಸ್‍ಮಸ್ ಅಂಗವಾಗಿ ಉಚಿತ ಆರೋಗ್ಯ ಶಿಬಿರ, ಶಾಲಾ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಣೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದವು.
ಚರ್ಚಗೆ ಸಾವಿರಾರು ಜನ ಆಗಮಿಸುವುದರಿಂದ ಪೋಲೀಸರ ಹೆಚ್ಚಿನ ಭದ್ರತೆ ಕಲ್ಪಿಸಿದ್ದಾರೆ. ಚರ್ಚ್‍ಗಳು ಸೇರಿದಂತೆ ಎಲ್ಲಾ ಕಣ್ಮನ ಸೆಳೆಯುವಂತೆ ಗೋಚರಿಸುತ್ತಿದ್ದವು.
ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಗೋವಾದ ರಾಜಧಾನಿ ಪಣಜಿಯಲ್ಲಿನ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚ್ ಸೇರಿದಂತೆ ಅನೇಕ ಪ್ರಾರ್ಥನಾ ಮಂದಿರಗಳು ವೈವಿಧ್ಯಮಯ, ವರ್ಣಮಯ ವಿದ್ಯುತ್ ದೀಪಾಲಂಕಾರ ಹಾಗೂ ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುತ್ತಿವೆ. ಗೋದಲಿಯಲ್ಲಿ ಬಾಲ ಏಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗಳುದ ಮೂಲಕ ಭಕ್ತಾದಿಗಳು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಯೇಸು ಜನ್ಮ ದಿನವನ್ನು ಸ್ವಾಗತಿಸಿದರು.
ಕೇರಳ, ಪಾಂಡಿಚೇರಿ, ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೊದಲಾದ ನಗರಗಳಲ್ಲಿರುವ ವಿಶ್ವವಿಖ್ಯಾತ ಚರ್ಚ್‍ಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದವು.
ಕರಾವಳಿ ರಾಜ್ಯ ಗೋವಾದ ಸೇಂಟ್ ಪ್ರಾನ್ಸಿಸ್ ಕ್ಸೇವಿಯರ್ ಚರ್ಚ್, ವೇಲಾಂಗಣಿಯ ಸೇಂಟ್ ಬೆಸಿಲಿಕಾ, ಕೋಲ್ಕತ್ತಾದ ಪ್ರಧಾನ ಚರ್ಚ್ ಸೇರಿದಂತೆ ದೇಶದ ವಿವಿಧ ಪ್ರಸಿದ್ಧ ಚರ್ಚ್‍ಗಳಲ್ಲಿ ನಡೆದ ವಿಶೇಷ ಸಮಾರಂಭಗಳಲ್ಲಿ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.