ಬೆಂಗಳೂರು, ಡಿ.25- ರಾಜ್ಯ ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರದ ರಜೆ ನೀಡಿ ಸಾಂದರ್ಭಿಕ ರಜೆಯನ್ನು 15 ರಿಂದ 12ಕ್ಕೆ ಕಡಿತ ಮಾಡಿದ ರಾಜ್ಯಸರ್ಕಾರ ಈಗ ಮತ್ತೊಂದು ಶಾಕ್ ನೀಡಿದೆ.
ಹಸ್ತ ಚಾಲಿತ ರಜೆ ವ್ಯವಸ್ಥೆಯನ್ನು ಬದಲಾವಣೆ ಮಾಡಿದ್ದು, ಇನ್ನು ಮುಂದೆ ರಜೆ ಪಡೆಯಬೇಕಾದರೆ ಇ-ತಂತ್ರಾಂಶದ ಮೂಲಕವೇ ಮನವಿ ಸಲ್ಲಿಸಬೇಕೆಂದು ಆದೇಶ ಹೊರಡಿಸಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಡಿ.23 ರಂದು ಸಿಆಸುಇ144ಕತವ -2019ರ ಆದೇಶದಲ್ಲಿ ಇನ್ನು ಮುಂದೆ ಇ-ಕಚೇರಿ ತಂತ್ರಾಂಶದಿಂದ ರಜೆಗೆ ಅರ್ಜಿ ಸಲ್ಲಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.
ಸಿ ವರ್ಗದ ವಾಹನ ಚಾಲಕರು ಹಾಗೂ ಗ್ರೂಪ್ ಡಿ ನೌಕರರನ್ನು ಹೊರತುಪಡಿಸಿ ಉಳಿದಂತೆ ಎ, ಬಿ, ಸಿ ವೃಂದದ ಅಧಿಕಾರಿ ಮತ್ತು ನೌಕರರಿಗೆ ಇ-ಲೀವ್ ತಂತ್ರಾಂಶವನ್ನು ಜ.1 ರಿಂದಲೇ ಕಡ್ಡಾಯವಾಗಿ ಜಾರಿಗೆ ತರಲಾಗಿದೆ.
ಈಗಾಗಲೇ ಇ-ಆಫೀಸ್‍ನ ಸರ್ವೀಸ್‍ನಲ್ಲಿ ನೀಡಲಾಗಿರುವ ಯೂಸರ್ ಐಡಿ ಮತ್ತು ಪಾಸ್‍ವರ್ಡ್‍ಗಳನ್ನು ಉಪಯೋಗಿಸಿ ಲಾಗಿನ್ ಆಗಿ ಇ-ಆಫೀಸ್ ಸರ್ವೀಸ್‍ನ ಲೀವ್ ಮ್ಯಾನೇಜ್‍ಮೆಂಟ್ ಸರ್ವೀಸ್‍ನಲ್ಲಿಯೇ ರಜೆಗೆ ಮನವಿ ಸಲ್ಲಿಸಬೇಕು. ಇನ್ನು ಹಸ್ತ ಚಾಲಿತ ವ್ಯವಸ್ಥೆಯನ್ನು ಕಡಿಮೆ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗ್ರೂಪ್ ಸಿ ವೃಂದದ ವಾಹನ ಚಾಲಕರು, ಗ್ರೂಪ್ ಡಿ ವೃಂದದ ಸಿಬ್ಬಂದಿಗಳು ಇ-ಕಚೇರಿ ತಂತ್ರಾಂಶ ಬಳಸದೆ ಇರುವುದರಿಂದ ಅವರುಗಳು ಹಸ್ತಚಾಲಿತ ವ್ಯವಸ್ಥೆಯಲ್ಲೇ ರಜೆಗೆ ಮನವಿ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಹಸ್ತ ಚಾಲಿತ ವ್ಯವಸ್ಥೆಯಲ್ಲಿ ಸಿಬ್ಬಂದಿಗಳು ಪಾರದರ್ಶಕತೆ ಇರಲಿಲ್ಲ ಎಂದು ಹೇಳಲಾಗುತ್ತಿತ್ತು. ಸಿಬ್ಬಂದಿಗಳು ರಜೆ ಪಡೆದು ವಾಪಸ್ ಬಂದ ಬಳಿಕ ಹಸ್ತಚಾಲಿತ ವ್ಯವಸ್ಥೆಯಲ್ಲಿ ಮನವಿ ಸಲ್ಲಿಸುತ್ತಿದ್ದರು. ಅಧಿಕಾರಿಗಳು ಸಿಬ್ಬಂದಿಗಳಿಗೆ ಕಠಿಣವಾಗಿ ಹೇಳಲು ಸಾಧ್ಯವಾಗದೆ ರಜೆ ಮಂಜೂರು ಮಾಡುತ್ತಿದ್ದರು. ಇದರಲ್ಲಿ ಉತ್ತರದಾಯಿತ್ವದ ಕೊರತೆ ಇತ್ತು. ಹಾಗಾಗಿ ನೂತನ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.