ಮುಂಬೈ,ಡಿ.25- ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕತ್ವ ನೋಂದಣಿಯಿಂದ ಮುಸ್ಲಿಮರು ಮಾತ್ರವಲ್ಲದೆ ಹಿಂದೂ ಸಮುದಾಯವೂ ಸಹ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ಮೂಕಜನ ಅಘಾಡಿ ಪಕ್ಷದ (ಎಂಎಪಿ) ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಎಚ್ಚರಿಸಿದ್ದಾರೆ.
ಸಿಎಎ-ಎನ್ಆರ್ಸಿ ಕಾಯ್ದೆ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ನಡೆದ ಸಭೆಯಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ಮುಸ್ಲಿಮರಲ್ಲದೆ ಈ ವಿವಾದಿತ ಅಧಿನಿಯಮಗಳಿಂದ ದೇಶದಲ್ಲಿ ಕನಿಷ್ಠ ಶೇ.40 ಹಿಂದೂಗಳು ತೊಂದರೆ ಅನುಭವಿಸಲಿದ್ದಾರೆ ಮತ್ತು ಅದರ ದುಷ್ಪರಿಣಾಮಗಳನ್ನು ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ.
ಇವುಗಳಲ್ಲಿ ಜನಸಂಖ್ಯೆಯ ಶೇ.12-16ರಷ್ಟು ಅಲೆಮಾರಿ ಬುಡಕಟ್ಟು ಜನಾಂಗದವರು ಸೇರಿದ್ದಾರೆ, ಶೇ.9ರಷ್ಟು ಗುಡ್ಡಗಾಡು ಸಮುದಾಯದವರಿದ್ದಾರೆ. ಸಣ್ಣ ವಲಸೆ ಕಾರ್ಮಿಕರು ಯಾವುದೇ ಅಧಿಕೃತ ದಾಖಲೆಗಳನ್ನು ಹೊಂದಿಲ್ಲ ಎಂಬ ಅಂಶವನ್ನು ಅವರು ಪ್ರಸ್ತಾಪಿಸಿದರು.
ಇಂತಹ ಸಂದರ್ಭಗಳಲ್ಲಿ ಜನನ ಪ್ರಮಾಣಪತ್ರಗಳನ್ನು ಹಾಜರುಪಡಿಸ ಬೇಕಾಗುತ್ತದೆ. ಅದನ್ನು ಒದಗಿಸುವಲ್ಲಿ ಸಾಧ್ಯವಾಗದಿದ್ದರೆ, ಅವರು ಎನ್ಆರ್ಸಿಯಡಿ ಕ್ರಮಕ್ಕೆ ಹೊಣೆಗಾರರಾಗುತ್ತಾರೆ ಎಂದು ಗಮನ ಸೆಳೆದರು.
ಭಾರತೀಯ ಜನತಾ ಪಕ್ಷದ ಹಕ್ಕುಗಳು ಮತ್ತು ಪ್ರಚಾರದ ಹೊರತಾಗಿಯೂ, ಈ ಹೊಸ ಕಾನೂನುಗಳು ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಹಿಂದೂ ಜನಸಂಖ್ಯೆಯ ಹೆಚ್ಚಿನ ಭಾಗಕ್ಕೂ ಧಕ್ಕೆ ತರುತ್ತವೆ ಎಂದು ಮಾಹಿತಿ ನೀಡಿದರು.