
ನವದೆಹಲಿ,ಡಿ.25- ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‍ಆರ್‍ಸಿ) ಹಾಗೂ ಜನಸಂಖ್ಯಾ ವರದಿ ವಿಷಯದಲ್ಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ನೀತಿಗಳ ಬಗ್ಗೆ ಎನ್‍ಡಿಎ ಮಿತ್ರ ಪಕ್ಷಗಳಲ್ಲೇ ತೀವ್ರ ಅಸಮಾಧಾನ ಭುಗಿಲೆದ್ದಿದೆ.
ಸಿಎಎ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದು ರೋಷಾಗ್ನಿಯ ಕಿಚ್ಚು ದೇಶಾದ್ಯಂತ ಹಬ್ಬಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಎನ್‍ಆರ್‍ಸಿ ಮತ್ತು ಜನಸಂಖ್ಯಾ ನೋಂದಣಿಗೆ ಮುಂದಾಗುತ್ತಿರುವ ಬಗ್ಗೆ ಮಿತ್ರ ಪಕ್ಷಗಳು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿವೆ.
ಎನ್‍ಡಿಎ ಪ್ರಮುಖ ಮಿತ್ರ ಪಕ್ಷವಾದ ಶಿರೋಮಣಿ ಅಕಾಲಿ ದಳ(ಎಸ್‍ಎಡಿ) ನಾಯಕ ನರೇಶ್ ಗುಜ್ರಾಲ್, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದಾಗ ಪ್ರತಿಯೊಂದು ವಿಷಯದಲ್ಲೂ ಎನ್‍ಡಿಎ ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೂಲಂಕುಷವಾಗಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ ಇಂಥ ಗುಣ ಬಿಜೆಪಿ ವರಿಷ್ಠರಲ್ಲಿ ಇಲ್ಲ ಎಂದು ಅವರು ವಿಷಾದಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸಿಎಎ ಮತ್ತು ಎನ್‍ಆರ್‍ಸಿ ತರಾತುರಿ ಜಾರಿಯ ಔಚಿತ್ಯವನ್ನು ಪ್ರಶ್ನಿಸಿದರು.
ಇದೇ ವೇಳೆ ಎನ್‍ಡಿಎ ಇತರ ಮಿತ್ರ ಪಕ್ಷಗಳು ಕಾಯ್ದೆ ಜಾರಿ ನಂತರ ಹಿಂಸಾತ್ಮಕ ಪ್ರತಿಭಟನೆಯಿಂದ ದೇಶದ ವಿವಿಧೆಡೆ 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ವ್ಯಾಪಕ ಹಾನಿ ಸಂಭವಿಸಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.