![Kanpur_protest](http://kannada.vartamitra.com/wp-content/uploads/2019/12/Kanpur_protest-678x339.jpg)
ನವದೆಹಲಿ/ಲಕ್ನೋ, ಡಿ.22-ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಮುಂದುವರೆದಿರುವ ಹಿಂಸಾತ್ಮಕ ಹೋರಾಟಗಳು ಮತ್ತಷ್ಟು ತೀವ್ರ ಸ್ವರೂಪ ಪಡೆದಿದ್ದು , ಉತ್ತರ ಪ್ರದೇಶದಲ್ಲಿ ನಿನ್ನೆ ನಡೆದ ಗಲಭೆಯನ್ನು ಹತ್ತಿಕ್ಕಲು ಪೋಲೀಸರು ನಡೆಸಿದ ಗೋಲಿಬಾರ್ನಲ್ಲಿ ಒಟ್ಟು 16 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ದೇಶದ ವಿವಿಧೆಡೆ ನಡೆದ ಹಿಂಸಾಚಾರ ಮತ್ತು ಪೋಲೀಸ್ ಗೋಲಿಬಾರ್ನಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿದೆ.
ಉತ್ತರ ಪ್ರದೇಶದ ರಾಂಪುರ ಮತ್ತು ಖಾನ್ಪುರದಲ್ಲಿ ನಿನ್ನೆ ಇನ್ನಿಬ್ಬರು ಮೃತಪಟ್ಟಿದ್ದು, ಇದುವರೆಗೆ ಹಿಂಸಾಚಾರ ಮತ್ತು ಗೋಲಿಬಾರ್ನಲ್ಲಿ 16 ಮಂದಿ ಸಾವಿಗೀಡಾಗಿದ್ದಾರೆ.
ಈ ಕಾಯ್ದೆ ವಿರೋಧಿಸಿ ಅಸ್ಸೋಂನಲ್ಲಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆ ವೇಳೆ ಪೋಲೀಸರು ನಡೆಸಿದ ಗೋಲಿಬಾರ್ನಲ್ಲಿ ಆರು ಮಂದಿ ಹತರಾಗಿದ್ದರು. ಕರ್ನಾಟಕದ ಮಂಗಳೂರಿನಲ್ಲಿ ಪೋಲೀಸ್ ಗೋಲಿಬಾರ್ಗೆ ಇಬ್ಬರು ಬಲಿಯಾಗಿದ್ದರು. ಇದರೊಂದಿಗೆ ಪೌರತ್ವ ರೋಷಾಗ್ನಿಯ ಕಿಚ್ಚಿಗೆ ಈವರೆಗೆ 24 ಮಂದಿ ಅಸುನೀಗಿದ್ದಾರೆ.
ಹಿಂಸಾಚಾರ ಮತ್ತು ನಂತರ ಪೋಲೀಸರು ನಡೆಸಿದ ಬಲಪ್ರಯೋಗದಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು , ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆಯಲ್ಲಿ ಪೋಲೀಸರು ಸೇರಿದಂತೆ ಹಲವರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಉತ್ತರಪ್ರದೇಶದ ಗೋರಖ್ಪುರ, ಸಂಭಲ್, ಭದೋಹಿ, ಬಹ್ರೈಚ್, ಫರೂಖಾಬಾದ್, ಬುಲಂದಶಹರ್, ವಾರಣಾಸಿ, ಫಿರೋಜಾಬಾದ್, ರಾಂಪುರ, ಕಾನ್ಪುರ, ಬಿಜ್ನೋರ್, ಮೇರಠ್ ಹಾಗೂ ಇನ್ನೂ ಅನೇಕ ಜಿಲ್ಲೆಗಳಲ್ಲಿ ವ್ಯಾಪಕ ಗಲಭೆ ಮತ್ತು ಹಿಂಸಾಚಾರ ಭುಗಿಲೆದ್ದು ರಣರಂಗವಾಗಿ ಪರಿಣಮಿಸಿತ್ತು.
ಅಕ್ಷರಶಃ ರಣರಂಗವಾದ ಉತ್ತರಪ್ರದೇಶದಲ್ಲಿ ಇಂದೂ ಕೂಡ ಉದ್ರಿಕ್ತ ಪರಿಸ್ಥಿತಿ ನೆಲೆಗೊಂಡಿದ್ದು , ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದೆ. ಮತ್ತೆ ಯಾವುದೇ ರೀತಿಯ ಅಹಿತಕರ ಘಟನೆಗಳು ಮರು ಕಳಿಸದಂತೆ ತಡೆಯಲು ಕಟ್ಟೆಚ್ಚರ ವಹಿಸಿದ್ದು , ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಉದ್ದೇಶಿತ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಅಸ್ಸೋಂ ಸೇರಿದಂತೆ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ನವದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮೊದಲಾದ ರಾಜ್ಯಗಳಲ್ಲಿ ಭುಗಿಲೆದ್ದ ಹಿಂಸಾಚಾರದ ನಂತರ ಈಗ ಪರಿಸ್ಥಿತಿ ತಹಬದಿಗೆ ಬಂದಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.