ಬೆಂಗಳೂರು, ಡಿ.22- ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ವಿಜೇತರಾದ 13 ಮಂದಿ ನೂತನ ಶಾಸಕರು ಇಂದು ಅಧಿಕಾರ ಸ್ವೀಕರಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೂತನ ಶಾಸಕರಿಗೆ ಅಧಿಕಾರ ಗೌಪ್ಯತೆ ಬೋಧಿಸಿದರು.
ಮಹೇಶ್ ಕುಮಟಳ್ಳಿ(ಅಥಣಿ), ಶ್ರೀಮಂತಪಾಟೀಲ್(ಕಾಗವಾಡ), ರಮೇಶ್ಜಾರಕಿ ಹೊಳಿ(ಗೋಕಾಕ್), ಶಿವರಾಂ ಹೆಬ್ಬಾರ್(ಯಲ್ಲಾಪುರ), ಅರುಣ್ಕುಮಾರ್ (ರಾಣೆಬೆನ್ನೂರು), ಬಿ.ಸಿ.ಪಾಟೀಲ್(ಹಿರೇಕೆರೂರು), ಆನಂದ್ಸಿಂಗ್(ವಿಜಯನಗರ), ಭೆರತಿ ಬಸವರಾಜ್(ಕೆ.ಆರ್.ಪುರಂ), ಕೆ.ಗೋಪಾಲಯ್ಯ (ಮಹಾಲಕ್ಷ್ಮೀಲೇಔಟ್), ಎಸ್.ಟಿ.ಸೋಮಶೇಖರ್ (ಯಶವಂತಪುರ), ಡಾ.ಕೆ.ಸುಧಾಕರ್(ಚಿಕ್ಕಬಳ್ಳಾಪುರ), ಕೆ.ಸಿ.ನಾರಾಯಣಗೌಡ(ಕೆ.ಆರ್.ಪೇಟೆ) ಹಾಗೂ ಶರತ್ಬಚ್ಚೇಗೌಡ (ಹೊಸಕೋಟೆ) ಅವರು ನೂತನ ಶಾಸಕರಾಗಿ ಇಂದು ಅಧಿಕಾರ ಸ್ವೀಕರಿಸಿದರು.
ರಾಣೆಬೆನ್ನೂರಿನ ಶಾಸಕ ಅರುಣ್ಕುಮಾರ್ ತಮ್ಮ ಮನೆ ದೇವರಾದ ಕೊಟ್ಟೂರು ಬಸವೇಶ್ವರ, ಹಿರೇಕೆರೂರಿನ ಬಿ.ಸಿ.ಪಾಟೀಲ್ ಬಸವಣ್ಣ, ಉಳಿದಂತೆ ಎಲ್ಲಾ ಶಾಸಕರು ಸತ್ಯ ಭಗವಂತ ಮತ್ತು ಸಂವಿಧಾನ ನಿಷ್ಠೆಯಡಿ ಕೆಲಸ ಮಾಡುವುದಾಗಿ ಶಪಥ ಮಾಡಿದರು.
ಬಿ.ಸಿ.ಪಾಟೀಲ್ ರೇಷ್ಮೆ ಶಾಲು ಹೊದ್ದು ಮಿರಿಮಿರಿ ಮಿಂಚಿದರೆ, ಉಳಿದ ಶಾಸಕರು ಕೇಸರಿ ಶಾಲು ಧರಿಸಿದ್ದರು. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಒಬ್ಬೊಬ್ಬರ ಹೆಸರು ಕರೆಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಬೆಂಬಲಿಗರು ಜೈಕಾರ ಹಾಕಿ ಘೋಷಣೆ ಕೂಗಿದರು. ಅದರಲ್ಲೂ ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಹೆಸರು ಕರೆಯುತ್ತಿದ್ದಂತೆ ನೆರೆದಿದ್ದ ಭಾರೀ ಸಂಖ್ಯೆಯ ಕಾರ್ಯಕರ್ತರು ಭಾರೀ ಘೋಷಣೆ ಕೂಗಿದ್ದು ವಿಶೇಷವಾಗಿತ್ತು.
ಕೆ.ಸಿ.ನಾರಾಯಣಗೌಡ ಮತ್ತು ಶ್ರೀಮಂತಪಾಟೀಲ್ ಪ್ರಮಾಣ ವಚನ ಸ್ವೀಕರಿಸುವ ವೇಳೆ ತಡವರಿಸಿದ್ದು ಕಂಡುಬಂತು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೆಲವು ಕಾರಣಾಂತರಗಳಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಅಂದಿನ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಅವರು, ಕಾಂಗ್ರೆಸ್-ಜೆಡಿಎಸ್ ಹಾಗೂ ಓರ್ವ ಪಕ್ಷೇತರ ಶಾಸಕ ಸೇರಿದಂತೆ ಒಟ್ಟು 17 ಮಂದಿ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಿ ಪ್ರಸಕ್ತ ವಿಧಾನಸಭೆ ಅವಧಿ ಮುಗಿಯುವವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಿದ್ದರು. ಬಳಿಕ ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಸುದೀರ್ಘ ಕಾನೂನು ಹೋರಾಟ ನಡೆದು ಸ್ಪೀಕರ್ ಅವರ ಶಾಸಕರ ಅನರ್ಹತೆ ಆದೇಶವನ್ನು ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ಎತ್ತಿಹಿಡಿದು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿತ್ತು.
ಕಳೆದ ಡಿ.5 ರಂದು ಮತದಾನ ನಡೆದು ಡಿ.9 ರಂದು ಮತ ಎಣಿಕೆ ನಡೆದಿತ್ತು. 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳನ್ನು, ಕಾಂಗ್ರೆಸ್ 2 ಹಾಗೂ ಹೊಸಕೋಟೆಯಲ್ಲಿ ಪಕ್ಷೇತರ ಸ್ಪರ್ಧಿಸಿ ವಿಜೇತರಾಗಿದ್ದರು.
ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ಸುರೇಶ್ಕುಮಾರ್, ಎಚ್.ನಾಗೇಶ್ ಹಾಗೂ ನೂತನ ಶಾಸಕರು, ಸಂಬಂಧಿಕರು, ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿದ್ದರು.
ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಶಾಸಕರಾದ ಎಚ್.ಸಿ.ಮಂಜುನಾಥ್(ಹುಣಸೂರು) ಹಾಗೂ ರಿಜ್ವಾನ್ ಅರ್ಷದ್(ಶಿವಾಜಿನಗರ) ಈ ಇಬ್ಬರು ಗೈರು ಹಾಜರಾಗಿದ್ದರು.