
ಬೆಂಗಳೂರು, ಡಿ.22-ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಸಂಕ್ರಾಂತಿ ನಂತರವೇ ನಡೆಯುವ ಸಾಧ್ಯತೆ ಇದೆ ಎಂಬ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೂತನ ಶಾಸಕರಿಗೆ ನೀಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕೆಲವು ಕಾರಣಗಳಿಂದ ಮುಂದೂಡಿಕೆಯಾಗಿದೆ. ತಿಂಗಳ ಅಂತ್ಯಕ್ಕೆ ದೆಹಲಿಗೆ ಬರುವಂತೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ. ನಂತರವೇ ಸಮಯ ನಿಗದಿಪಡಿಸಿಕೊಂಡು ತೆರಳುವುದಾಗಿ ತಿಳಿಸಿದರು.
ಸಂಕ್ರಾಂತಿ ಹಬ್ಬದ ನಂತರ ನೂತನ ಶಾಸಕರಿಗೆ ಸಿಹಿ ಸುದ್ದಿ ಸಿಗಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರಾಯಶಃ ಸಂಕ್ರಾಂತಿ ಬಳಿಕವೇ ಸಂಪುಟ ವಿಸ್ತರಣೆಯಾಗಬಹುದು. ವರಿಷ್ಠರ ಜೊತೆ ಚರ್ಚಿಸದೆ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ. ಇದು ಎಲ್ಲರಿಗೂ ತಿಳಿದಿದೆ ಎಂದು ಸೂಚ್ಯವಾಗಿ ಹೇಳಿದರು.
ನಾವು ಚುನಾವಣೆಗೂ ಮುನ್ನ ನೂತನ ಶಾಸಕರಿಗೆ ಯಾವ ಆಶ್ವಾಸನೆ ಕೊಟ್ಟಿದ್ದೆವೋ ಅದನ್ನು ಈಡೇರಿಸುತ್ತೇವೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಗೊಂದಲ ಬೇಡ. ಕೆಲವು ಕಾರಣಗಳಿಂದ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿದೆ. ಇದರ ನಿಜಾಂಶ ಏನೆಂಬುದು ನೂತನ ಶಾಸಕರಿಗೆ ಗೊತ್ತಿದೆ. ದೆಹಲಿ ನಾಯಕರಿಂದಲೂ ಯಾವುದೇ ವಿರೋಧ ವಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಮುಂಬೈ-ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಕಳಸಾ ಬಂಡೂರಿ ನಾಲಾ ಯೋಜನೆ ವಿವಾದ ಕುರಿತಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಜೊತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಅರಣ್ಯ ಮತ್ತು ಪರಿಸರ ಇಲಾಖೆ ನೀಡಿದ್ದ ಅಧಿಸೂಚನೆಯನ್ನು ಯಾವ ಕಾರಣಕ್ಕಾಗಿ ಹಿಂಪಡೆಯಲಾಗಿದೆ ಎಂಬುದರ ಕುರಿತಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಜಾವಡೇಕರ್ ಜೊತೆ ಚರ್ಚೆ ಮಾಡಿದ್ದಾರೆ.
ಕೆಲವು ಆಂತರಿಕ ಕಾರಣಗಳಿಂದ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ. ಶೀಘ್ರದಲ್ಲೇ ಕರ್ನಾಟಕ ಜನತೆಗೆ ಸಿಹಿ ಸುದ್ದಿ ನೀಡುವುದಾಗಿ ಸಚಿವರು ತಿಳಿಸಿದ್ದಾರೆ. ಇದರಲ್ಲಿ ಯಾರಿಗೂ ಯಾವುದೇ ರೀತಿಯ ಗೊಂದಲ ಬೇಡ ಎಂದು ಬಿಎಸ್ವೈ ಮನವಿ ಮಾಡಿದರು. ಕಳಸಾ ಬಂಡೂರಿ ನಾಲಾ ಯೋಜನೆ ಕುಡಿಯುವ ನೀರು ಯೋಜನೆಯಾಗಿರುವುದರಿಂದ ಯಾರೊಬ್ಬರೂ ಅಡ್ಡಿ ಪಡಿಸಬಾರದು. ಪರಿಸರಕ್ಕೆ ಹಾನಿಯಾಗದಂತೆ ಯೋಜನೆಯನ್ನು ಅನುಷ್ಠಾನ ಮಾಡುವುದಾಗಿ ಸಂಬಂಧಪಟ್ಟ ಇಲಾಖೆ ಮತ್ತು ನ್ಯಾಯಾಧೀಕರಣಕ್ಕೂ ಸ್ಪಷ್ಟಪಡಿಸಿದ್ದೇವೆ. ಕೇಂದ್ರ ರಾಜ್ಯಮತ್ತು ಗೋವಾದಲ್ಲಿ ನಮ್ಮ ಪಕ್ಷವೇ ಆಡಳಿತದಲ್ಲಿವೆ. ಹಲವು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಮುಂದುವರಿಕೆಯಾಗುತ್ತಿರುವ ಯೋಜನೆಯನ್ನು ಅನುಷ್ಠಾಣಗೊಳಿಸುವುದು ನಮ್ಮ ಜವಾಬ್ದಾರಿ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದ ಎಎಂದು ಹೇಳಿದರು.
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ ಕುರಿತಂತೆ ಕಾಂಗ್ರೆಸ್ ಪಕ್ಷದವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಮಸೂದೆ ಜಾರಿಯಾಗುವುದರಿಂದ ಯಾರೊಬ್ಬರಿಗೂ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದೆ. ಆದರೆ ಕಾಂಗ್ರೆಸ್ ನಾಯಕರು ಮುಸ್ಲಿಮರಿಗೆ ಗೊಂದಲವಾಗುತ್ತದೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ರಾಜ್ಯದಲ್ಲಿ ಉಂಟಾಗಿರುವ ಗಲಭೆಗೆ ಕಾಂಗ್ರೆಸ್ಸಿಗರೇ ನೇರ ಹೊಣೆ ಎಂದು ಆಪಾದಿಸಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರೇ ಬೀದಿಗಿಳಿದು ಜನರು ಪ್ರತಿಭಟನೆ ನಡೆಸುವಂತೆ ಕುಮ್ಮಕ್ಕು ನೀಡುತ್ತಾರೆ. ಅವರಿಂದ ಪ್ರೇರೇಪಿತರಾದ ಕಾಂಗ್ರೆಸ್ ನಾಯಕರು ಗಲಭೆ ನಡೆಸುವ ಷಡ್ಯಂತ್ರ ನಡೆಸಿದ್ದಾರೆ. ಕಾಯ್ದೆ ಜಾರಿಯಾಗುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ರಾಜ್ಯದ ಜನತೆ ಕಾಂಗ್ರೆಸ್ಸಿಗರ ಷಡ್ಯಂತ್ರಕ್ಕೆ ಬಲಿಯಾಗಬಾರದೆಂದು ಮುಖ್ಯಮಂತ್ರಿ ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಕೆಲಸವಿಲ್ಲದ ಕಾಂಗ್ರೆಸ್ ನಾಯಕರು ಮನಸೋ ಇಚ್ಚೇ ಮಾತನಾಡುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೂ ಕೂಡ ಹೇಗೆ ನಡೆದುಕೊಳ್ಳಬೇಕೆಂಬ ಸಾಮಾನ್ಯ ಜ್ಞಾನವೂ ಇಲ್ಲ. ರಾಜ್ಯದಲ್ಲಿ ನಡೆದಿರುವ ಘಟನೆಗೆ ಕಾಂಗ್ರೆಸ್ನವರೇ ಕಾರಣ ಎಂದು ಟೀಕಾಪ್ರಹಾರ ನಡೆಸಿದರು.
ಮಾಜಿ ಸಚಿವ ಯು.ಟಿ.ಖಾದರ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಪೋಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಳ್ಳುವುದಾಗಲಿ, ಪ್ರಚೋದನಾಕಾರಿ ಹೇಳಿಕೆ ನೀಡುವುದಾಗಲಿ ಮಾಡಬಾರದು. ಮಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಕಫ್ರ್ಯೂ ಸಡಿಲಿಕೆ ಮಾಡಲಾಗಿದ್ದು, ಜನರು ಸಹಜ ಸ್ಥಿತಿಗೆ ಮರಳುತ್ತಿದ್ದಾರೆ ಎಂದರು.ಅಸ್ತವ್ಯಸ್ತಗೊಂಡಿದ್ದ ಪರಿಸ್ಥಿತಿ ಸರಿ ಹೋಗುತ್ತಿದೆ. ನಾನು ಪ್ರತಿಕ್ಷಣದ ಮಾಹಿತಿಯಿಂದ ಅಧಿಕಾರಿಗಳಿಂದ ಪಡೆಯುತ್ತಿದ್ದೇನೆ ಎಂದು ತಿಳಿಸಿದರು.