ಸರ್ಕಾರಕ್ಕೆ ಮಾನವೀಯತೆ, ಮನುಷ್ಯತ್ವ ಇಲ್ಲ- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಡಿ.22-ಮಂಗಳೂರು ಗೋಲಿಬಾರ್ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಜೊತೆಗೆ ಇನ್ನೂ ಏಳೆಂಟು ಮಂದಿಗೆ ಗುಂಡು ತಗುಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ಮಂಗಳೂರಿಗೆ ಭೇಟಿ ನೀಡಿದ ಅವರು, ಗಲಭೆ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಗೋಲಿಬಾರ್‍ನಲ್ಲಿ ಮೃತಪಟ್ಟ ಇಬ್ಬರು ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ನಂತರ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಮಾನವೀಯತೆ, ಮನುಷ್ಯತ್ವ ಇಲ್ಲ ಎಂದು ಕಿಡಿಕಾರಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಲು ಡಿ.11 ರಿಂದಲೇ ವಿವಿಧ ಸಂಘಟನೆಗಳು ಅನುಮತಿ ಕೇಳುತ್ತಿದ್ದವು. ಡಿ.13 ರಂದು ಕಲಬುರಗಿಯಲ್ಲಿ ಸಾವಿರಾರು ಜನ ಸೇರಿ ಪ್ರತಿಭಟನೆ ನಡೆಸಿದರು, ಡಿ.18 ರಂದು ಪ್ರತಿಭಟನೆ ನಡೆಸಲು ವಿವಿಧ ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿಗಳು ಹಲವು ಸಂಘಟನೆಗಳಿಗೆ ಅನುಮತಿ ನೀಡಿದ್ದರು. ಆದರೆ ಮಧ್ಯಾಹ್ನ 1 ಗಂಟೆಯಿಂದ ಪೋಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಎಸ್‍ಪಿಗಳಿಗೆ ನಿಷೇಧಾಜ್ಞೆ ಜಾರಿಗೊಳಿಸುವಂತೆ ರಾತ್ರಿ 7 ಗಂಟೆಗೆ ಸೂಚನೆ ನೀಡಿದ್ದಾರೆ.

ಈಗಾಗಲೇ ಪ್ರತಿಭಟನೆಗೆ ಅನುಮತಿ ನೀಡಿದ್ದೇವೆ. ಈವರೆಗೂ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಸಮಯ ಕಳೆದಿದ್ದೇವೆ. ಪ್ರತಿಭಟನೆಗೆ ಅನುಮತಿ ಪಡೆದ ಸಂಘಟನೆ ಮುಖಂಡರನ್ನು ಕರೆದು ಮಾತುಕತೆ ನಡೆಸಿ ಮನವೊಲಿಸಲು ನಮಗೆ ಸಮಯವಿಲ್ಲ. ನಾಳೆ ಹೆಚ್ಚೂಕಡಿಮೆಯಾದರೆ ಯಾರು ಹೊಣೆ ಎಂದು ಕೆಲವು ಎಸ್‍ಪಿಗಳು ವಿಡಿಯೋ ಕಾನ್ಫರೆನ್ಸ್ ಕೊನೆಯಲ್ಲಿ ಪ್ರಶ್ನಿಸಿದ್ದಾರೆ. ಆದರೂ ನಿಷೇಧಾಜ್ಞೆ ಜಾರಿಗೆ ಬಲವಾದ ಒತ್ತಡ ಹೇರಿದ್ದು ಯಾರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ನಿಷೇಧಾಜ್ಞೆ ಅರಿವಿಲ್ಲದೆ ಬಹಳಷ್ಟು ಅಮಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರು, ಕಲಬುರಗಿ ಸೇರಿದಂತೆ ವಿವಿಧೆಡೆ ಶಾಂತಿಯುತ ಪ್ರತಿಭಟನೆ ನಡೆದಿದೆ. ಮಂಗಳೂರಿನಲ್ಲಿ ಮಾತ್ರ ಗಲಭೆಯಾಗಲು, ಗೋಲಿಬಾರ್ ನಡೆಯಲು ಕಾರಣಗಳೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದೆ ಶೋಭಾಕರಂದ್ಲಾಜೆ ಗಲಭೆಗೆ ಕಾಂಗ್ರೆಸ್ಸಿಗರು ಕಾರಣ ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕಾಂಗ್ರೆಸ್ಸಿಗರನ್ನು ಸ್ಯಾಡಿಸ್ಟ್ ಗಳು ಎಂದಿದ್ದಾರೆ. ಆದರೆ ಸ್ಯಾಡಿಸ್ಟ್ ಗಳು ಬಿಜೆಪಿಯವರು, ಅಮಾಯಕರನ್ನು ನಿರ್ದಯವಾಗಿ ಕೊಂದಿದ್ದಾರೆ. ಗೋಲಿಬಾರ್‍ನಲ್ಲಿ ಸಾವನ್ನಪ್ಪಿದ ನೌಷದ್ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಸ್ನೇಹಿತನೊಂದಿಗೆ ಮನೆಗೆ ಹೋಗುತ್ತಿದ್ದ. ಮತ್ತೊಬ್ಬರು ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆತಂದು ಮನೆಗೆ ಬಿಟ್ಟು ಗಲಾಟೆ ಸದ್ದಿಗೆ ಹೊರಬಂದು ಗೇಟ್ ಹಾಕುತ್ತಿದ್ದರು. ಆತನಿಗೂ ಗುಂಡು ಹಾರಿಸಿದ್ದಾರೆ. ಹೆಂಡತಿ ಕಣ್ಣೆದುರೇ ಆತ ಸಾವನ್ನಪ್ಪಿದ್ದಾರೆ. ಗಲಭೆ ನಿಯಂತ್ರಿಸಲು ಮಾಜಿ ಮೇಯರ್ ಅಶ್ರಫ್ ಅವರನ್ನು ಖುದ್ದು ಆಯುಕ್ತರೇ ಆಹ್ವಾನ ನೀಡಿದ್ದಾರೆ. ಅವರಿಗೂ ಗಾಯವಾಗಿ ಆಸ್ಪತ್ರೆಯಲ್ಲಿದ್ದಾರೆ. ಪ್ರತಿಭಾನ್ವಿತ ಪಿಎಚ್‍ಡಿ ವಿದ್ಯಾರ್ಥಿಗೆ, ಶಾಲಾ ಶುಲ್ಕ ಪಾವತಿಸಲು ಬಂದಿದ್ದ ಮತ್ತೊಬ್ಬ ವಿದ್ಯಾರ್ಥಿಗೆ ಹೀಗೆ ಎಂಟು ಮಂದಿ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಮಲಗಿದ್ದಾರೆ.

ತರಾತುರಿಯಲ್ಲಿ ಮಂಗಳೂರಿಗೆ ಬಂದ ಮುಖ್ಯಮಂತ್ರಿಯವರು 10 ನಿಮಿಷದಲ್ಲೇ ಎಲ್ಲಾ ಸಭೆ ಮುಗಿಸಿ ಹೋಗಿದ್ದಾರೆ. ಯಾವ ಮಾಹಿತಿಯನ್ನೂ ಪಡೆದಿಲ್ಲ. ಆಸ್ಪತ್ರೆಗೂ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಗಲಭೆಗೆ ಕಾರಣರಾದ ಪೋಲೀಸರನ್ನು ಅಮಾನತುಗೊಳಿಸುವುದಷ್ಟೇ ಅಲ್ಲ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಇದು ಗುಜರಾತ್ ಅಲ್ಲ, ಕರ್ನಾಟಕ. ಗೋದ್ರಾದಂತೆ ಬೆಂಕಿ ಹಚ್ಚುವುದಾಗಿ ಹೇಳುವ ಸಚಿವರನ್ನು ಇಟ್ಟುಕೊಂಡು ಆಡಳಿತ ನಡೆಸುವುದರಿಂದ ಸೌಹಾರ್ದತೆ ಸೃಷ್ಟಿಯಾಗುವುದಿಲ್ಲ. ಸಾರ್ವಜನಿಕರಿಗೆ ರಕ್ಷಣೆ ನೀಡುವುದು ಮುಖ್ಯಮಂತ್ರಿಯವರ ಕರ್ತವ್ಯ. ಗಲಭೆಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು. 24 ಗಂಟೆಯೊಳಗಾಗಿ ಗೋಲಿಬಾರ್ ಮಾಡಿದ ಪೋಲೀಸರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಂಗಳೂರಿಗೆ ಬಾರದಂತೆ ತಡೆದಿರುವ ಕ್ರಮವನ್ನು ಕುಮಾರಸ್ವಾಮಿ ಪ್ರಶ್ನಿಸಿ, ಕಿಡಿಕಾರಿದರಲ್ಲದೆ, ವಿಧಾನಸಭೆಯಲ್ಲಿ ಈ ವಿಷಯಗಳನ್ನು ನಾವು ಪ್ರಸ್ತಾಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ